ಬಂಟ್ವಾಳ, ಆ.12(DaijiworldNews/AA): ಸ್ವಾವಲಂಬಿ ಬದುಕಿಗಾಗಿ ಧಣಿವರಿಯದೆ ದುಡಿಯುತ್ತಿರುವ ತಾಯಿ. ಮನೆ ಬಾಡಿಗೆಗೂ ಪರದಾಡುವ ಸ್ಥಿತಿ. ಮುರುಕಲು ಮನೆಯಾದರೂ ಸರಿಯಾದ ಸ್ವಂತ ಸೂರು ಇದ್ದರೆ ಮನೆ ಬಾಡಿಗೆಯ ಹಣವನ್ನಾದರೂ ಉಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಂಚವಾದರೂ ಹಣ ಉಳಿತಾಯ ಮಾಡಬಹುದು ಎಂದು ಯೋಚಿಸಿ, ಇದ್ದ ಚಿನ್ನಾಭರಣವನ್ನೆಲ್ಲ ಮಾರಿ, ಬ್ಯಾಂಕೊಂದರಿಂದ ಸಾಲವನ್ನೂ ಪಡೆದು ಮನೆಯೊಂದನ್ನು ಖರೀಸಿದ್ದರು. ಖರೀದಿಸಿದ ಎರಡೇ ತಿಂಗಳಲ್ಲಿ ಸತತವಾಗಿ ಸುರಿದ ಮಳೆಗೆ ಮನೆಯ ಗೋಡೆಗಳು ಕುಸಿದು ಕುಟುಂಬ ಕಂಗಾಲಾಗಿದೆ. ತಾಯಿಯ ಮಡಿಲೇ ಈಗ ಮೂರು ಮಕ್ಕಳಿಗೆ ಬೆಚ್ಚನೆಯ ಆಸರೆಯಾಗಿದೆ. ಆದರೆ ಬೆಚ್ಚಗಿನ ಸೂರಿನ ಕನಸು ಕಂಡಿದ್ದ ಬಡ ಮಹಿಳೆಯ ಬಹುದಿನದ ಪ್ರಯತ್ನಗಳು ನೀರಿನ ಮೇಲೆ ಇರಿಸಿದ ಹೋಮದಂತೆ ನಿರರ್ಥಕವಾಗಿದೆ.
ಹೌದು... ಇದು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ವನಿತಾ ಶೆಟ್ಟಿ ಕುಟುಂಬದ ದಯನೀಯ ಸ್ಥಿತಿ.
ಕಣ್ಣೆದುರೇ ಕುಸಿದ ಬಹುದಿನದ ಕನಸು
ವನಿತಾರಿಗೆ ಮೂವರೂ ಹೆಣ್ಣು ಮಕ್ಕಳು. ಆದರೆ ಹೆಣ್ಣು ಮಕ್ಕಳೆಂಬ ಕೀಳರಿಮೆ ಆಕೆಗೆ ಎಳ್ಳಷ್ಟೂ ಇಲ್ಲ. ಬಡತನದ ಬವಣೆಯ ಮಧ್ಯೆ ಯಾರ ಮುಂದೆಯೂ ಕೈ ಚಾಚದೆ ಸ್ವಾವಲಂಬಿಯಾಗಿ ದುಡಿದು ತನ್ನ ಮೂರು ಮಕ್ಕಳಿಗೂ ಶಿಕ್ಷಣ ನೀಡಿ, ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುವುದು ಆಕೆಯ ಕನಸು.
ವಿಪರ್ಯಾಸವೆಂದರೆ ಆ ಛಲಗಾತಿ ತಾಯಿಯ ಹೆಬ್ಬಯಕೆಯು ಇತ್ತೀಚೆಗೆ ಹನಿಕಡಿಯದೆ ಸುರಿದ ರಣಮಳೆ ನುಚ್ಚು ನೂರಾಗಿದೆ. ಭವಿಷ್ಯಕ್ಕೆ ಆಸರೆಯಾಗಿದ್ದ ಮನೆ ಕಣ್ಣೆದುರೇ ಕುಸಿದು ನೆಲಕಚ್ಚಿದೆ.
ಆಶ್ರಯ ಕಳೆದುಕೊಂಡ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ದಿಕ್ಕೆಟ್ಟು ನಿಂತ ತಾಯಿಯ ಅರಣ್ಯ ರೋಧನ ಸ್ಥಳೀಯ ಜನಪ್ರತಿನಿಧಿಗಳ ಕಿವಿಗೆ ಬಿದ್ದಿಲ್ಲ. ಸೂಕ್ತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಮಾನವೀಯ ಸ್ಪಂದನೆಯನ್ನೂ ನೀಡದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನದ ಮಾತುಗಳೂ ಕೇಳಿ ಬಂದಿವೆ. ಸಂಘ ಸಂಸ್ಥೆಗಳಾದರೂ ಬಡ ತಾಯಿಯ ನೆರವಿಗೆ ಧಾವಿಸಬಹುದು ಎಂಬ ಆಶಯದಿಂದ ಖುದ್ಧು ಶಿಕ್ಷಕರೇ ಮನವಿ ಪತ್ರಗಳನ್ನು ಸಿದ್ಧಪಡಿಸಿ ಮಾನವೀಯತೆ ಮೆರೆದಿದ್ದಾರೆ.
ಸೂರು ಕಳೆದುಕೊಂಡ ಪ್ರತಿಭಾವಂತ ಮಕ್ಕಳು.
ಮಕ್ಕಳಿಗೆ ಬಡತನದ ಬೇಗೆ ತಟ್ಟದಂತೆ ಶ್ರಮ ವಹಿಸಿ ಶಿಕ್ಷಣ ನೀಡುತ್ತಿರುವ ವನಿತಾ ಅವರ ಮಕ್ಕಳು ಪ್ರತಿಭಾವಂತರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು, ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಾಗಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಕುಟುಂಬದ ಸಂಕಷ್ಟಕ್ಕೆ ಶಿಕ್ಷಕರೂ ತಮ್ಮಿಂದಾದ ನೆರವನ್ನು ನೀಡಿ ಧೈರ್ಯ ತುಂಬಿದ್ದಾರೆ. ಶಿಕ್ಷಕರು ನೀಡಿದ ಧೈರ್ಯದ ಮಾತುಗಳೇ ವನಿತಾರಿಗೆ ಬಿರುಬೇಸಗೆಯಲ್ಲಿ ಸಿಕ್ಕಿದ ಒರತೆಯಂತೆ ಆಶಾವಾದವನ್ನು ಮೂಡಿಸಿದೆ.
ನಿತ್ಯವೂ ಕಾಡುತ್ತಿದೆ ಆತಂಕ
ಸಂಸಾರದ ಸಂಪೂರ್ಣ ಭಾರ ನನ್ನ ಹೆಗಲ ಮೇಲಿದೆ. ಆದಾಗ್ಯೂ ನನ್ನ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ ಉತ್ತಮ ಸ್ಥಾನಕ್ಕೆ ತಲುಪಿಸಬೇಕು ಎಂಬುದು ನನ್ನ ಜೀವನದ ಹೆಬ್ಬಯಕೆ. ಬಾಡಿಗೆ ಹಣ ಉಳಿತಾಯ ಮಾಡಿಯಾದರೂ ವಿದ್ಯೆ ಕೊಡಿಸಬೇಕೆಂಬ ಆಶಯದಿಂದ ಇಟ್ಟ ಹೆಜ್ಜೆಯೇ ನನಗೆ ಮುಳುವಾಗಿ ಪರಿಣಮಿಸಿದೆ. ಸೂಕ್ತ ನೆಲೆಯೇ ಕಂಡುಕೊಳ್ಳಲು ಸಾಧ್ಯವಾಗದ ನನ್ನಿಂದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಿದೆಯೇ ಎಂಬ ಆತಂಕ ನಿತ್ಯವೂ ಕಾಡುತ್ತಿದೆ ಎಂಬುದು ಸಂತ್ರಸ್ತ ಮಹಿಳೆ ವನಿತಾ ಶೆಟ್ಟಿ ಅವರ ನೋವಿನ ಮಾತು.
ನೀವು ನೆರವಾಗುವಿರಾದರೆ...
ಮನೆ ನಿರ್ಮಿಸಲು ಧನಸಹಾಯ ನೀಡಲಿಚ್ಛಿಸುವ ದಾನಿಗಳು ವನಿತಾ, ಯೂನಿಯನ್ ಬ್ಯಾಂಕ್ ಪೊಳಲಿ ಶಾಖೆ, ಖಾತೆ ಸಂಖ್ಯೆ520101024952180, ಐಎಫ್ಎಸ್ಸಿ ಕೋಡ್ UBIN0929824 ಧನಸಹಾಯ ನೀಡಬಹುದು. ಹೆಚ್ಚಿನ ಮಾಹಿತಿಗೆ 70267 75683 ಸಂಪರ್ಕಿಸಬಹುದಾಗಿದೆ.