ಬಂಟ್ವಾಳ, ಆ.12(DaijiworldNews/AA): ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಲದ ಅರ್ಜಿಯನ್ನು ಕಾರಣಗಳಿಲ್ಲದೆ ತಿರಸ್ಕಾರ ಮಾಡಲಾಗುತ್ತಿದೆ ಎಂಬ ಆರೋಪ ಬಂಟ್ವಾಳ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾಯಿತು.
ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಬಿಸಿರೋಡಿನ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಈ ಕುರಿತು ಕೆಲಕಾಲ ಚರ್ಚೆ ನಡೆಯಿತು. ಈ ಕುರಿತು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಬ್ಯಾಂಕ್ ಮ್ಯಾನೇಜರ್ ಗಳ ಸಭೆಯಲ್ಲಿ ಪ್ರಸ್ತಾಪಿಸಿ ವಿವರ ಪಡೆಯುವುದಾಗಿ ಲೀಡ್ ಬ್ಯಾಂಕ್ ಅಧಿಕಾರಿ ತಿಳಿಸಿದರು.
ಮಂಗಳೂರಿನಲ್ಲಿ ವಾಸಿಸುವವರಿಗೆ ಉಚಿತ ನೀರು ನೀಡುತ್ತಿರುವಾಗ ಬಂಟ್ವಾಳದ ಎಸ್ಸಿ ಮತ್ತು ಎಸ್ಟಿ ಜನರಿಗೆ ಏಕೆ ಉಚಿತ ನೀರು ನೀಡುತ್ತಿಲ್ಲ ಎಂದು ವಿಶ್ವನಾಥ ಚೆಂಡ್ತಿಮಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಂಬಂಧಪಟ್ಟ ಅಧಿಕಾರಿಗಳು, ನಗರ ಪಾಲಿಕೆ ಮತ್ತು ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ವ್ಯತ್ಯಾಸವಿದ್ದು, ಸರ್ಕಾರದ ಮಟ್ಟದಲ್ಲಿ ನಿಯಮಗಳಲ್ಲಿ ಸುಧಾರಣೆ ತರಬೇಕಿದೆ ಎಂದು ಉತ್ತರಿಸಿದರು.
ನಗರದ ಅಭಿವೃದ್ಧಿ ಬಗ್ಗೆ ಪುರಸಭೆ ಸ್ಪಷ್ಟ ಚಿತ್ರಣ ನೀಡುತ್ತಿಲ್ಲ ಎಂದು ಕೆಲವರು ಪ್ರಶ್ನಿಸಿದರು. ಪ್ರತಿ ಸಭೆಯಲ್ಲೂ ಯೋಜನೆ ರೂಪಿಸಿದ್ದೇವೆ ಆದರೆ ಅನುಷ್ಠಾನ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆಗಳ ಬಗ್ಗೆ ಸಭೆ ಕರೆಯಬೇಕು, ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿರಬೇಕು ಎಂದು ಗಂಗಾಧರ ಅವರು ಹಿಂದಿನ ಸಭೆಯಲ್ಲಿ ತಿಳಿಸಿದ್ದರು. ಆದರೆ ಎರಡು ಮನವಿಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ದ ಗಂಗಾಧರ ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪುರಸಭೆ ಇಲಾಖೆ ನಮ್ಮ ಅಭಿವೃದ್ಧಿಗೆ ನಯಪೈಸೆ ಅನುದಾನ ನೀಡಿದೆ ನಮ್ಮನ್ನು ಕತ್ತಲಲ್ಲಿ ಇಟ್ಟಿದೆ, ಸಭೆಯಲ್ಲಿ ನಡೆಯುವ ನಿರ್ಣಯಗಳು ಕೇವಲ ದಾಖಲಾತಿ ಮಾತ್ರವೇ ಹೊರತು ಕಾರ್ಯರೂಪಕ್ಕೆ ತರಲು ಅಧಿಕಾರಿಗಳಿಗೆ ಮನಸ್ಸಿಲ್ಲ ಎಂದು ಆರೋಪ ಮಾಡಿದರು.
ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಹೊನ್ನಪ್ಪ ಕುಂದರ್ ಆರೋಪ ಮಾಡಿದರು. ಸ್ಥಳೀಯ ಪ್ರತಿಭೆಗಳಿಗೆ ನಿಯಮಾನುಸಾರವಾಗಿ ನೇಮಕಾತಿ ಪ್ರಕ್ರಿಯೆ ಮಾಡದೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಕ್ರಮ ವ್ಯವಸ್ಥೆಯ ಮೂಲಕ ನೇಮಕಾತಿ ಮಾಡಿದ್ದಾರೆ ಇದರ ವಿರುದ್ದ ಡಿ.ಡಿ.ಪಿ.ಐ.ಗೆ ಪತ್ರ ಬರೆಯುತ್ತೇವೆ ಎಂದು ಅವರು ತಿಳಿಸಿದರು. ಅಡ್ಯನಡ್ಕ ಸಂಚಾರಿ ಆಸ್ಪತ್ರೆಗೆ ವಾಹನವಿಲ್ಲದೆ ಅಲ್ಲಿನ ವೈದ್ಯರು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಗುಡ್ಡಗಾಡು ಪ್ರದೇಶದ ನಮ್ಮ ಸಮುದಾಯಕ್ಕೆ ಸರಿಯಾದ ಸಮಯಕ್ಕೆ ಔಷಧಿ ಸಿಗದೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಹಳೆಯ ವಾಹನಕ್ಕೆ 15 ವರ್ಷವಾದ ಹಿನ್ನೆಲೆಯಲ್ಲಿ ವಾಹನವನ್ನು ಗುಜರಿಗೆ ಸರಕಾರದ ನಿಯಮದಂತೆ ನೀಡಿದ್ದಾರೆ. ಆದರೆ ಬದಲಾಗಿ ಇಲಾಖೆ ಹೊಸ ವಾಹನವನ್ನು ನೀಡಿಲ್ಲ ಯಾಕೆ ಎಂದು ಅಶೋಕ್ ನಾಯ್ಕ್ ಪ್ರಶ್ನೆ ಮಾಡಿದರು.
ಸರಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಯಾಕೆ ನೀಡಬೇಕು, ಸರಕಾರದ ಸ್ಪಷ್ಟವಾದ ಅದೇಶವಿದ್ದರು ಇಲ್ಲಿನ ಬಿ.ಇ.ಒ.ಯಾಕೆ ನೀಡುತ್ತಿದ್ದಾರೆ. ಬಡವರ ಮಕ್ಕಳು ಹೋಗುವ ಸರಕಾರಿ ಶಾಲೆಗಳ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವ ಸಾಧ್ಯಗಳು ಇವೆ. ಆದ್ದರಿಂದ ಈ ಬಗ್ಗೆ ಕಠಿಣವಾದ ನಿರ್ಣಯವನ್ನು ತೆಗೆದುಕೊಳ್ಳಲು ಮನವಿ ಮಾಡಿದರು. ಮಂಚಿಕಜೆ ಎಂಬಲ್ಲಿ ಗಾಂಜಾ ಸೇವನೆ ಮಾಡಿ ಯುವಕರು ಸಾರ್ವಜನಿಕವಾಗಿ ತೊಂದರೆ ನೀಡುವುದು ಜಾಸ್ತಿಯಾಗಿದ್ದು, ಈ ಬಗ್ಗೆ ಪೋಲೀಸ್ ಇಲಾಖೆ ಕ್ರಮವಹಿಸುವಂತೆ ತಿಳಿಸಿದರು. ಭಜನೆ, ಯೂಟ್ಯೂಬ್ ಚಾನೆಲ್ ಮತ್ತು ಟ್ಯಾಬ್ಲೋ ಗಳಲ್ಲಿ ಕೀಳು ಮಟ್ಟದ ಪದಗಳ ಬಳಕೆ ಮಾಡದಂತೆ ಕ್ರಮವಹಿಸುವಂತೆ ಮನವಿ ಮಾಡಿದರು.
ಅಂಬೇಡ್ಕರ್ ಭವನ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ಎಂಬಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆ ಭವನದಲ್ಲಿ ನಡೆಯಿತು. ಈ ಹಿಂದೆ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯುತ್ತಿತ್ತು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಯಶ್ರೀ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರ ಮನೀಶ್, ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಉಪಸ್ಥಿತರಿದ್ದರು.