ಮಂಗಳೂರು, ಆ.12(DaijiworldNews/AA): 'ಕುಡ್ಲದಗಿಪ್ಪ ಕುಂದಾಪ್ರದರ್' ವಾಟ್ಸಪ್ ಬಳಗದ ವತಿಯಿಂದ ಆಗಸ್ಟ್ 11 ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ಕಾಲೇಜಿನ ವಠಾರದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯು ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮವು ಬೆಳಿಗ್ಗೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳೊಂದಿಗೆ ಪ್ರಾರಂಭವಾಯಿತು. ರಾಮಕೃಷ್ಣ ಕಾಲೇಜಿನ ಸಂಚಾಲಕರಾದ ಡಾ.ಸಂಜೀವ ರೈ ಇವರು ಬಲೂನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ನಿಂಬೆ ಹಣ್ಣಿನ ಒಟ, ಮೂರು ಕಾಲಿನ ಒಟ, ಗೋಣಿಚೀಲದ ಓಟ, ಗೂಟ ಸುತ್ತಿ ಓಡುವುದು, ಹಗ್ಗಜಗಾಟದ ಮುಂತಾದ ಕ್ರೀಡಾ ಚಟುವಟಿಕೆಗಳ ಜೊತೆಗೆ ಮಡಲು ನೇಯುವ ಸ್ಪರ್ಧೆಗಳು ನಡೆದವು.
ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೇರಿ ಸುಮಾರು 200 ಜನರು ಪಾಲ್ಗೊಂಡು ಸಂಭ್ರಮಿಸಿದರು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮಕ್ಕೆ ವಿಜಯ ಬ್ಯಾಂಕ್ನ ನಿವೃತ್ತ ಡಿ.ಜಿ.ಎಂ. ಹಾಲಾಡಿ ಶಾಂತರಾಮ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಹಾಗೂ ಕಳಸಿಗೆ ಭತ್ತ ಸುರಿದು ನೇಣಿಕೋಲು ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು.
ಬಳಿಕ ಬಾಲಕೃಷ್ಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು ರಾಮಕೃಷ್ಣ ಕಾಲೇಜು ಇವರು ಕುಂದಗನ್ನಡದ ಲಘುದಾಟಿಯ ಭಾಷಣದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ದರಾಗಿಸಿದರು. ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ವಿಶ್ವಕುಂದಾಪುರ ಕನ್ನಡ ದಿನಾಚರಣೆ ಆಯೋಜನಾ ಸಮಿತಿ ಗೌರವಾಧ್ಯಕ್ಷರಾದ ದಯಾನಂದ ಶೆಟ್ಟಿ ಉಪಾಧ್ಯಕ್ಷರಾದ ಮಮತ ಜಿ.ಐತಾಳ್ ಇವರು ಸಭೆಯಲ್ಲಿ ಹಾಜರಿದ್ದರು. ಆಯೋಜನಾ ಸಮಿತಿ ಅಧ್ಯಕ್ಷರಾದ ಜಿ.ಕೆ.ಶೆಟ್ಟಿಯವರು ಪ್ರಸ್ತಾವನೆ ಗೈದು ಅತಿಥಿಗಳನ್ನು ಸ್ವಾಗತಿಸಿದರು. ಆರ್.ಜಿ.ನಯನ ಮತ್ತು ಆರ್.ಜಿ.ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು. ಆಯೋಜನಾ ಸಮಿತಿ ಕಾರ್ಯದರ್ಶಿಯಾದ ರಾಮಕೃಷ್ಣ ಮರಾಟಿಯವರು ವಂದಾನರ್ಪಣೆ ಗೈದರು.
ಕುಡದಗಿಪ್ಪ ಕುಂದಾಪುರದ ಎಲ್ಲಾ ಹಿರಿಯರು ಮತ್ತು ಮಾರ್ಗದರ್ಶಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆದವು. ಚೇತನ್ ನೈಲಾಡಿ ತಂಡದಿಂದ ಹೆಂಗ್ ವಂಚೇತಿ ಎನ್ನುವ ಕುಂದಗನ್ನಡದ ವಿಶಿಷ್ಟವಾದ ಹಾಸ್ಯ ಚಟುವಟಿಕೆಯನ್ನು ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಧನ್ಯವಾದ ಸಮರ್ಪಣೆಯನ್ನು ಸಂತೋಷ್ ಕುಮಾರ್ ಶೆಟ್ಟಿ (ಎಸ್ ಬಾಂಡ್) ಇವರು ನೆರವೇರಿಸಿದರು.