ಉಡುಪಿ, ಆ. 12 (DaijiworldNews/AK): ಉಡುಪಿಯ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪೂರ್ವಭಾವಿಯಾಗಿ ಭಾನುವಾರ ವೆಲಂಕಣಿ ಮಾತೆಯ ಪ್ರತಿಮೆಯ ಭವ್ಯ ಮೆರವಣಿಗೆಯು ನಡೆಯಿತು.
ಮೆರವಣಿಗೆಯು ಕಲ್ಮಾಡಿ ಸೇತುವೆಯಿಂದ ಪ್ರಾರಂಭವಾಗಿ ಕಲ್ಮಾಡಿ ಚರ್ಚ್ ನ ವರೆಗೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಾಗಿ ಬಂದಿತು. ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಡಾಕ್ಟರ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ತೇರು ಮೆರವಣಿಗೆಗೆ ಚಾಲನೆ ನೀಡಿದರು.
ಕಲ್ಮಾಡಿ ವೆಲಂಕಣಿ ಮಾತೆ ಪುಣ್ಯಕ್ಷೇತ್ರದ ರೆಕ್ಟರ್ ಫಾದರ್ ಬ್ಯಾಪ್ಟಿಸ್ಟ್ ಮೆನೇಜಸ್ ಅವರು ಕಾರ್ಯಕ್ರಮದಲ್ಲಿ ನೆರೆದ ಭಕ್ತರಿಗೆ ಸ್ವಾಗತ ಕೋರಿದರು. ಇದೇ ಸಂಧರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಡಾಕ್ಟರ್ ಅಲೋಷಿಯಸ್ ಪಾವ್ಲ್ ಡಿಸೋಜಾರವವರು ಪವಿತ್ರ ಬಲಪೂಜೆಯನ್ನು ಮತ್ತು ಆರನೇ ದಿನದ ನೊವೆನಾ ಪ್ರಾರ್ಥನೆಗಳನ್ನು ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಯುವಜನರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಆಗಸ್ಟ್ 15 ರಂದು ವಿಜೃಂಭಣೆಯಿಂದ ನಡೆಯಲಿದ್ದು, ಅಂದು ಬೆಳಿಗ್ಗೆ 10:30 ಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ರವರು ಮಹೋತ್ಸವದ ಸಂಭ್ರಮದ ಪ್ರಧಾನ ಬಲಿಪೂಜೆಯನ್ನು ಸರ್ಮಪಿಸಲಿದ್ದಾರೆ. ಅದೇ ದಿನ ಬೆಳಿಗ್ಗೆ 7:30 ಮತ್ತು ಸಂಜೆ 4 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಮತ್ತು ಸಂಜೆ 6 ಗಂಟೆಗೆ ಇಂಗ್ಲಿಷ್ ಭಾಷೆಯಲ್ಲಿ ಇತರ ಬಲಿಪೂಜೆಗಳು ಕೂಡಾ ಜರುಗಲಿವೆ.