ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮುಂಬರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಭಾರತ ಪ್ರವಾಸದ ದಿನಾಂಕವನ್ನು ಪ್ರಕಟಿಸಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿ ಈ ತಿಂಗಳ ಎರಡನೇ ವಾರದಲ್ಲಿ ಆರಂಭಗೊಳ್ಳಲಿದ್ದರೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ.
ಆಸೀಸ್ ಮತ್ತು ಟೀಂ ಇಂಡಿಯಾ ಚೆನ್ನೈ, ಕೊಲ್ಕತ್ತಾ, ಇಂದೋರ್, ಬೆಂಗಳೂರು ಮತ್ತು ನಗ್ಪುರದಲ್ಲಿ ಏಕದಿನ ಪಂದ್ಯಗಳನ್ನು ಆಡಲಿವೆ.
ಜೊತೆಗೆ ಮೂರು ಟಿ20 ಪಂದ್ಯಗಳೂ ನಡೆಯಲಿದ್ದು ರಾಂಚಿ, ಗುವಾಹಟಿ ಮತ್ತು ಹೈದರಾಬಾದ್ ಈ ಪಂದ್ಯಗಳ ಆತಿಥ್ಯವನ್ನು ವಹಿಸಲಿವೆ.
ಏಕದಿನ ಪಂದ್ಯಗಳು ಕ್ರಮವಾಗಿ ಸೆಪ್ಟಂಬರ್ 17,21, 24,28 ಮತ್ತು ಅಕ್ಟೋಬರ್ 1ರಂದು ನಡೆದರೆ ಟಿ20 ಪಂದ್ಯಗಳು ಅಕ್ಟೋಬರ್ 7, 10 ಮತ್ತು 13ರಂದು ನಡೆಯಲಿವೆ.
ಸೆಪ್ಟಂಬರ್ 12ರಂದು ಚೆನ್ನೈಯಲ್ಲಿ ಮಂಡಳಿ ಅಧ್ಯಕ್ಷರ ತಂಡ ಆಸೀಸ್ ವಿರುದ್ಧ ವಾರ್ಮ್ ಅಪ್ ಮ್ಯಾಚ್ ಆಡಲಿದೆ.
ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.
ಅಕ್ಟೋಬರ್ 22 ಮತ್ತು 25 ನಡೆಯಲಿರುವ ಏಕದಿನ ಪಂದ್ಯಗಳ ಆತಿಥ್ಯವನ್ನು ಕ್ರಮವಾಗಿ ಮುಂಬೈ, ಪುಣೆ ವಹಿಸಿದ್ದರೆ ಅಕ್ಟೋಬರ್ 29ರಂದು ನಡೆಯಲಿರುವ ಕೊನೆಯ ಏಕದಿನ ಪಂದ್ಯದ ಆತಿಥ್ಯವನ್ನು ಉತ್ತರ ಪ್ರದೇಶ ಕ್ರಿಕೆಟ್ ಮಂಡಳಿ ವಹಿಸಿದ್ದು ಸ್ಥಳವಿನ್ನೂ ನಿಗದಿಯಾಗಿಲ್ಲ.
ಕಿವೀಸ್ ವಿರುದ್ಧ ನಡೆಯಲಿರುವ ಮೂರು ಟಿ20 ಪಂದ್ಯಗಳು ನವದೆಹಲಿ, ರಾಜ್ಕೋಟ್ ಮತ್ತು ತಿರುವನಂತಪುರಂನಲ್ಲಿ ಕ್ರಮವಾಗಿ ನವಂಬರ್ 1, 4 ಮತ್ತು 7ರಂದು ನಡೆಯಲಿವೆ.