ವರದಿ: ಮಾನಸ ಪುದುವೆಟ್ಟು
ಮಂಗಳೂರು,ಮೇ 22 (Daijiworld News/MSP): ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಬಾಕಿ ಇರುವುದು ಇನ್ನು ಕೆಲವೇ ಗಂಟೆಗಳಷ್ಟೇ..ಅತ್ತ ಜಿಲ್ಲಾಡಳಿತ ಮತ ಎಣಿಕೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದರೆ, ರಿಸಲ್ಟ್ ‘ಕೌಂಟ್’ ಡೌನ್ ಪ್ರಾರಂಭವಾಗುತ್ತಿದ್ದಂತೆಯೇ ಇತ್ತ ಜನ ಸಾಮಾನ್ಯರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದು, ಈ ಬಾರಿ ಬಿಜೆಪಿಯ ನಳಿನ್ ಕುಮಾರ್ ಕಟೀಲು ಅಥವಾ ಕಾಂಗ್ರೆಸ್ನ ಮಿಥುನ್ ರೈ ಇವರಿಬ್ಬರಲ್ಲಿ ಯಾರ ಕೊರಳಿಗೆ ವಿಜಯಮಾಲೆ ಬೀಳಬಹುದು ಎಂಬ ಕೂತೂಹಲ ಮತದಾರರದ್ದು. ಎನ್ ಡಿ ಎ ಪರವಾಗಿ ಬಂದ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಗೆ ಪ್ಲಸ್ ಆಗಿದ್ದರೂ ಆತಂಕದ ಸ್ಥಿತಿ ಇದ್ದೇ ಇದೆ. ಯಾಕೆಂದರೆ ತನ್ನ ಹಳೆಯ ಸಂಪ್ರದಾಯ ಬದಿಗಿರಿಸಿದ ಕಾಂಗ್ರೆಸ್ ಯುವ ನಾಯಕನಿಗೆ ಮಣೆ ಹಾಕಿ 35ರ ಯುವಕ ಮಿಥುನ್ ರೈ ಅವರನ್ನು ಕಣಕ್ಕೆ ಇಳಿಸಿದ್ದು , ಹಾಲಿ ಸಂಸದರಿಗೆ ಕಠಿಣ ಸ್ಪರ್ಧೆ ಏರ್ಪಡುವಂತೆ ಮಾಡಿತು.
ಒಂದು ವೇಳೆ ದ,ಕ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಜಯಗಳಿಸಿದರೆ ಅದು ಅವರಿಗೆ ಹ್ಯಾಟ್ರಿಕ್ ಸಾಧನೆ. ಮಿಥುನ್ ಗೆದ್ದರೆ 29 ವರ್ಷಗಳ ಬಳಿಕ ಬಿಜೆಪಿಯ ಭದ್ರಕೋಟೆ ನುಗ್ಗಿ ಕಾಂಗ್ರೆಸ್ ಪತಾಕೆ ಹಾರಿಸಿದ ಕೀರ್ತಿ ಮಿಥುನ್ ಮುಡಿಗೇರುತ್ತದೆ. ಮಾತ್ರವಲ್ಲದೆ ಕಾಂಗ್ರೆಸ್ನ ಘಟಾನುಘಟಿ ನಾಯಕರಿಂದ ಸಾಧ್ಯವಾಗದ್ದನ್ನು ಸಾಧಿಸಿದ ಹೆಗ್ಗಳಿಕೆ ಮಿಥುನ್ ಅವರದಾಗಲಿದೆ.
ನಳಿನ್ ಗೆದ್ದರೆ ಹ್ಯಾಟ್ರಿಕ್ ಸಾಧನೆಯ ಜತೆಗೆ ಬಿಜೆಪಿಯ ಗೆಲುವಿನ ಪರಂಪರೆ ಮುನ್ನಡೆಸಿದ ಕೀರ್ತಿಗೆ ಪಾತ್ರರಾಗುತ್ತಾರೆ. ಕಾಂಗ್ರೆಸ್ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ದರೂ ಸೋಲಿಸಿ ಬಿಜೆಪಿಯ ಭದ್ರ ಕೋಟೆಯನ್ನು ಮತ್ತಷ್ಟು ಬಲಪಡಿಸಿದ ಖ್ಯಾತಿ ಅವರಿಗೆ ಲಭಿಸುತ್ತದೆ.
ಒಟ್ಟಾರೆ ವಿಜಯದ ಕೀರ್ತಿಪತಾಕೆ ಹಿಡಿವವರು ಯಾರು ಎಂಬ ಪ್ರಶ್ನೆಗೆ ಮೇ 23 ರ ಸಂಜೆಯವರೆಗೆ ಕಾಯಲೇಬೇಕು.