ಮೂಡುಬಿದಿರೆ, ಆ.11(DaijiworldNews/AA): ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕಂಬಳ ಸಮಿತಿಯ ನೇತೃತ್ವದಲ್ಲಿ 26 ಕಂಬಳಗಳು ನಡೆಯಲಿವೆ. ಬೆಂಗಳೂರಿನಲ್ಲಿ ಆಗಸ್ಟ್ 29 ರಂದು ಕಂಬಳ ನಡೆಯುವ ಮೂಲಕ ಪ್ರಾರಂಭವಾಗಲಿದೆ. ಮತ್ತು ಕೊನೆಯದಾಗಿ 2025ರ ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಇದಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆಯಾ ಕಂಬಳ ಸಮಿತಿಗಳು ಹೆಚ್ಚು ಆಕರ್ಷಕವಾಗಿ ಮಾಡಲು ಕೆಲವು ನಿಯಮಗಳನ್ನು ಪಾಲಿಸಬೇಕು. ಅದೇ ಉಪ ನಿಯಮಗಳನ್ನು ರೂಪಿಸಲಾಗುವುದು. ಅಲ್ಲದೆ ಕಂಬಳ ವಿಳಂಬವಾಗುವುದನ್ನು ತಡೆಯಲು ಚಿಂತನೆ ನಡೆಸಲಾಗುವುದು ಎಂದರು.
ನಿಲ್ಲಿಸಲಾಗಿದ್ದ ಪಿಲಿಕುಳ ಕಂಬಳ ಈ ವರ್ಷ ಮತ್ತೆ ಆರಂಭವಾಗಲಿದೆ. ಕಂಬಳವನ್ನು ಪ್ರವಾಸೋದ್ಯಮದ ಅಂಗವಾಗಿ ಮಾಡಲು ತುಳುನಾಡ ವೈಭವ ಕಾರ್ಯಕ್ರಮ ನಡೆಯಲಿದೆ. ಕಂಬಳಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ನಡೆಯಲಿದೆ. ಜೊತೆಗೆ ಕಂಬಳ ಭವನವನ್ನೂ ನಿರ್ಮಿಸಲಾಗುವುದು. ಸರ್ಕಾರ ಪ್ರತಿ ಕಂಬಳಕ್ಕೆ ತಲಾ ಐದು ಲಕ್ಷ ಅನುದಾನ ನೀಡಬೇಕು. ನಿಯೋಗ ಸಿಎಂ ಅವರನ್ನು ಭೇಟಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ನವೀನಚಂದ್ರ ಆಳ್ವ, ಶ್ರೀಕಾಂತ್ ಭಟ್, ಸಂದೀಪ್ ಶೆಟ್ಟಿ, ಪ್ರಶಾಂತ್ ಕಾಜವ, ರಶ್ಮಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿ ಚಂದ್ರಹಾಸ ಸನಿಲ್, ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ ಉಪಸ್ಥಿತರಿದ್ದರು.