ಸುಬ್ರಹ್ಮಣ್ಯ, ಆ.9(DaijiworldNews/AK): ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂಜಾಡಿ ಬಳಿಯ ಮುಕ್ತಿಧಾಮಕ್ಕೆ ಕೊನೆಗೂ ಬೆಳಕಿನ ಭಾಗ್ಯ ಲಭಿಸಿದೆ. ಕಳೆದ ಹಲವಾರು ಸಮಯಗಳಿಂದ ಮುಕ್ತಿಧಾಮದಲ್ಲಿ ಯಾವುದೇ ಬೆಳಕಿನ ವ್ಯವಸ್ಥೆಯಿಲ್ಲದೆ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಸ್ಥಳೀಯ ನಾಗರಿಕರು ಪರದಾಟ ನಡೆಸುತ್ತಿದ್ದರು.
ಆಗಸ್ಟ್. 8ರಂದು ಸ್ಥಳೀಯರೋರ್ವರು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರವನ್ನು ಮುಕ್ತಿಧಾಮದಲ್ಲಿ ನೆರವೇರಿಸಲಾಗಿತ್ತು. ಆದರೆ, ಬೆಳಕಿನ ವ್ಯವಸ್ಥೆಯಿಲ್ಲದ ಮೃತ ವ್ಯಕ್ತಿಯ ಮನೆಯವರು ತಮ್ಮ ವಾಹನಗಳ ಲೈಟ್ ಬಳಸಿಕೊಂಡು ಅಂತ್ಯಸಂಸ್ಕಾರ ನಡೆಸುವ ಶೋಚನೀಯ ಸ್ಥಿತಿಯ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿ ವರದಿ ಬಿತ್ತರಿಸಿತ್ತು.
ಇದೀಗ, ದಾಯ್ಜಿವರ್ಲ್ಡ್ ವಾಹಿನಿ ವರದಿಯ ಬಳಿಕ ಎಚ್ಚೆತ್ತುಕೊಂಡ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳು ಆಗಸ್ಟ್ 9ರಂದು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ. ಇನ್ನು, ಮುಕ್ತಿಧಾಮದ ಸಮೀಪವೇ ಇರುವ ತ್ಯಾಜ್ಯ ವಿಲೇವಾರಿ ಘಟಕವು ದುಸ್ಥಿತಿಯಲ್ಲಿದ್ದು ಪರಿಸರದೆಲ್ಲಡೆ ತ್ಯಾಜ್ಯಗಳು ರಾಶಿ ಬಿದ್ದು, ದುರ್ನಾತ ಬೀರುತ್ತಿದೆ. ಈ ಬಗ್ಗೆಯೂ ಕೂಡಾ ದಾಯ್ಜಿವರ್ಲ್ಡ್ ವಾಹಿನಿ ವಿಶೇಷ ವರದಿಯನ್ನು ಬಿತ್ತರಿಸಿದೆ ಆದರೆ ಅಧಿಕಾರಿಗಳು ಮಾತ್ರ ಜಾಣ ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೆ, ಮುಕ್ತಿಧಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಬೇಕಿದೆ ಮಾತ್ರವಲ್ಲದೆ ಮುಕ್ತಿಧಾಮದ ಸೂಕ್ತ ನಿರ್ವಹಣೆಗೆ ಗ್ರಾಮ ಪಂಚಾಯತ್ ಮುಂದಾಗಬೇಕಿದೆ ಎಂದು ಸ್ಥಳೀಯರು ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.