ಕುಂದಾಪುರ,ಮೇ 22 (Daijiworld News/MSP): ನಗರದ ಗ್ರಾಮಾಂತರ ಠಾಣೆಯಲ್ಲಿ ಅಕ್ರಮ ಮರಳು ಸಾಗಾಟ ಆರೋಪಿಗಳನ್ನು ಕರೆ ತಂದಿರುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ಠಾಣೆಗೆ ಕಲ್ಲೆಸೆದು ದಾಂಧಲೆ ನಡೆಸಿದ ಆರೋಪಿಗಳಲ್ಲಿ ಎಂಟು ಜನರನ್ನು ಕಂಡ್ಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಬೆಟ್ಟಿ ಶಾಹೀದ್, ಜಾಕೀರ್ ಹುಸೇನ್, ತಬ್ರೀಜ್ ಹಾಗೂ ಶಾಕೀರ್ ಎಂಬುವರನ್ನು ಶುಕ್ರವಾರವೇ ಬಂಧಿಸಿದ್ದರು. ಮಂಗಳವಾರ ಮತ್ತೆ ಆರೋಪಿಗಳಿಗೆ ಶೋಧ ನಡೆಸಿದ ಪೊಲೀಸರು ಶಾಹಿದ್, ಫಹಾಜ್, ಅಬ್ದುಲ್ ಹಮೀದ್ ಹಾಗೂ ಅಜೀಮ್ ಎಂಬುವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಉಳಿದವರಿಗಾಗಿ ಶೋಧ ನಡೆಸಿದ್ದಾರೆ.
ಕಳೆದ ಗುರುವಾರ ಸಂಜೆ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ಕಂಡ್ಲೂರು ಠಾಣೆಯ ಪೊಲೀಸರು ನಿಗಾ ವಹಿಸಿದ್ದರು. ಗುರುವಾರ ಸಂಜೆಗತ್ತಲೆಯಲ್ಲಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸಂದರ್ಭ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಧರ ನಾಯ್ಕ್ ನೇತೃತ್ವದಲ್ಲಿ ಓಮ್ನಿ ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದು ದಂಧೆಕೋರರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿ ಆರೋಪಿ ಹಾಗೂ ವಾಹನವನ್ನು ಬಿಡುಗಡೆಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಎಸೈ ಶ್ರೀಧರ ನಾಯ್ಕ್ ಪ್ರಕರಣ ದಾಖಲಿಸುವುದಾಗಿಯೂ ಆರೋಪಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದರು. ಇದರಿಂದ ಆಕ್ರೋಶಿತಗೊಂಡ ದಂಧೆಕೋರರರಲ್ಲಿ ಕೆಲವು ಕಿಡಿಗೇಡಿಗಳು ಠಾಣೆಯ ಛಾವಣಿಯ ಮೇಲೆ ಕಲ್ಲೆಸೆದಿದ್ದಾರೆ. ಈ ಸಂದರ್ಭ ಪೊಲೀಸರು ಠಾಣೆಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಯತ್ನಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದು ನಾಲ್ಕು ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರು ಓಡಿಹೋಗಿದ್ದರು.
ಎರಡು ವರ್ಷಗಳ ಹಿಂದೆ ಅಂದರೆ ಎಪ್ರಿಲ್ 2, 2017ರ ರಾತ್ರಿ ಕಂಡ್ಲೂರಿನಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಹಾಗೂ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಮತ್ತು ಕಂದಾಯ ಇಲಾಖಾ ಸಿಬ್ಬಂದಿ ಕಾಂತರಾಜ್ ಎಂಬವರ ಮೇಲೆಯೂ ಇದೇ ಅಕ್ರಮ ದಂಧೆಕೋರರ ತಂಡ ದಾಳಿ ನಡೆಸಿ ಹಲ್ಲೆ ಮಾಡಿತ್ತು. ಘಟನೆಗೆ ಸಂಬಂಧಿಸಿ 27 ಜನರನ್ನು ಬಂಧಿಸಲಾಗಿತ್ತು ಮತ್ತು ಒಟ್ಟು 50 ಜನರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿತ್ತು. ಆಗ ಸ್ಥಳೀಯ ಕೆಲವು ರಾಜಕೀಯ ನಾಯಕರೂ ಅಕ್ರಮ ದಂಧೆಕೋರರ ಬೆಂಬಲಕ್ಕೆ ನಿಂತಿದ್ದರು. ಇದೀಗ ಸರಿಯಾಗಿ ಎರಡು ವರ್ಷಗಳ ಬಳಿಕ ಮತ್ತೆ ಪೊಲೀಸ್ ಇಲಾಖಾ ಕಚೇರಿಯ ಮೇಲೆ ಕಲ್ಲೆಸೆದು ದಾಂಧಲೆ ನಡೆಸಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಸಿದೆ. ಬಂಧಿತರ ವಿರುದ್ದ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.