ಬಂಟ್ವಾಳ, ಆ.08(DaijiworldNews/AA): ಹೆದ್ದಾರಿ ಸಹಿತ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ತ್ಯಾಜ್ಯಗಳನ್ನು ಎಸೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಇತ್ತ ಅಂತಹಾ ಕಿಡಿಗೇಡಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿದೆ. ಇದೀಗ ಮೊದಲ ಹಂತದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವ ಗ್ರಾಮಪಂಚಾಯತ್ ಸಜೀಪ ಮುನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ವಾಹನ ಸವಾರರಿಗೆ ಸಾವಿರಾರು ರೂ ದಂಡ ಹಾಕಿದ್ದಾರೆ.
ಸಿಸಿ ಕ್ಯಾಮೆರಾಗಳ ಮುಖೇನ ಕಸ ಎಸೆಯುವ ವಾಹನಗಳನ್ನು ಪತ್ತೆ ಹಚ್ಚಿದ ಗ್ರಾ.ಪಂ. ಆಡಳಿತ ಐದು ವಾಹನಗಳಿಗೆ ತಲಾ ಐದು ಸಾವಿರದಂತೆ ಒಟ್ಟು ಇಪ್ಪತ್ತೈದು ಸಾವಿರ ರೂ ದಂಡ ವಿಧಿಸಿದೆ ಎಂದು ಗ್ರಾ.ಪಂ.ಪಿ.ಡಿ.ಒ. ಲಕ್ಷಣ್ ತಿಳಿಸಿದ್ದಾರೆ.
ಸಜೀಪ ಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಮಾರ್ನಬೈಲು ಗುಳಿಗನ ಕಟ್ಟೆ ಸಮೀಪ ಹಾಗೂ ಪಾಣೆಮಂಗಳೂರು ಶಾರದ ಶಾಲೆಯ ಅಂಗಳದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕಸ ಎಸೆಯುವುದು ಮಾಮೂಲಿಯಾಗಿತ್ತು. ಈ ಬಗ್ಗೆ ಗ್ರಾ.ಪಂ.ಎಚ್ಚರಿಕೆಯ ನಾಮಫಲಕ ಅಳವಡಿಸಿದರೂ ಯಾರು ಕ್ಯಾರೇ ಮಾಡಿರಲಿಲ್ಲ. ಪ್ರತಿ ಗ್ರಾಮಪಂಚಾಯತ್ ಸಭೆಯಲ್ಲಿ ತ್ಯಾಜದ ವಿಚಾರದಲ್ಲಿ ಗಲಾಟೆಗಳು ನಡೆಯುತ್ತಿದ್ದು, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅಥವಾ ತಾರ್ಕಿಕ ಅಂತ್ಯ ವನ್ನು ಕಾಣಲು ಸಾಧ್ಯವಾಗಿರಲಿಲ್ಲ. ಬೇರೆ ಭಾಗದದಿಂದ ಅಂದರೆ ಗ್ರಾಮಗಳಿಂದ ವಾಹನಗಳಲ್ಲಿ ಬರುವವರು ರಸ್ತೆ ಬದಿಯಲ್ಲಿ ಕಸ ಎಸೆದುದು ಹೋಗುತ್ತಾರೆ ಎಂಬ ದೂರುಗಳು ನಿರಂತರವಾಗಿ ಕೇಳಿ ಬಂದಿತ್ತು. ಈ ಬಗ್ಗೆ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ, ಸರಕಾರದ ನಿಗದಿಪಡಿಸಿದ ದಂಡವನ್ನು ಹಾಕುವಂತೆ ಸಭೆಯಲ್ಲಿ ನಿರ್ಣಾಯ ಕೈಗೊಳ್ಳಲಾಗಿತ್ತು.
ಹಾಗಾಗಿ ಕಸ ರಾಶಿ ಬಿದ್ದಿರುವ ಕಡೆಗಳಲ್ಲಿ ಪಂಚಾಯತ್ ವತಿಯಿಂದ ಉತ್ತಮ ಗುಣಮಟ್ಟದ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಸಿ.ಸಿ.ಕ್ಯಾಮರಾ ಹಾಕುವ ಮುನ್ನ ರಸ್ತೆ ಬದಿಯಲ್ಲಿ ಗುಡ್ಡೆಯಂತಿದ್ದ ತ್ಯಾಜ್ಯ ವನ್ನು ಗ್ರಾ.ಪಂ.ನ ವತಿಯಿಂದ ವಿಲೇವಾರಿ ಮಾಡುವ ಕಾರ್ಯ ಮಾಡಲಾಗಿತ್ತು.
ಮತ್ತೆ ಮತ್ತೆ ಕಸ ಎಸೆಯುವ ಜನರ ಸಂಖ್ಯೆ ಜಾಸ್ತಿಯಾದಾಗ ಇಲ್ಲಿನ ಪಿಡಿಒ ಅವರು ಗ್ರಾ.ಪಂ.ಅಡಳಿತದ ಅನುಮತಿ ಪಡೆದು ಇವರ ವಿರುದ್ಧ ಕಾರ್ಯಚರಣೆಗೆ ಇಳಿದರು. ಸ್ಥಳದಲ್ಲಿ ಅಳವಡಿಸಲಾದ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ಕಸ ಎಸೆಯುವ ವಾಹನಗಳ ನೊಂದಣಿ ಸಂಖ್ಯೆಯ ಮೂಲಕ ವಿಳಾಸ ಪಡೆದು ನೋಟಿಸ್ ನೀಡಿ ದಂಡ ವಿಧಿಸಿದ್ದಾರೆ. ಇದೀಗ ಸಾರ್ವಜನಿಕ ವಲಯದಲ್ಲಿ ಸಂಚಲನವನ್ನು ಉಂಟುಮಾಡಿದ್ದು,ಕಸ ಎಸೆಯುವವರ ವಿರುದ್ದ ಗ್ರಾಪಂನ ನಿರ್ಧಾರವನ್ನು ಸ್ವಾಗತಿಸಿದೆ. ಕಸದ ರಾಶಿಯ ಸಮೀಪ ಶಾಲೆ ಹಾಗೂ ಅನೇಕ ಮನೆಗಳಿದ್ದು ಸಾಂಕ್ರಮಿಕ ರೋಗದ ಭೀತಿ ಅವರನ್ನು ಕಾಡಿತ್ತು. ಸಜಿಪ ಮುನ್ನೂರು ಗ್ರಾಮಪಂಚಾಯತ್ ಇಟ್ಟಿರುವ ಕಾನೂಕ್ರಮದ ಹೆಜ್ಜೆಯನ್ನು ತಾಲೂಕಿನ ಬಹುತೇಕ ಗ್ರಾಮಪಂಚಾಯತ್ ಹಾಗೂ ಪುರಸಭಾ ಆಡಳಿತ ಅನುಸರಿಸಬೇಕಾದ ಅಗತ್ಯ ಇದೆ.