ಉಡುಪಿ, ಆ.09(DaijiworldNews/AA): ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ದ್ವಂಸ, ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ಕೊಲೆ ಹಾಗೂ ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಮುಖೇನ ಮನವಿ ಸಲ್ಲಿಸಲಾಯಿತು.
ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ಆಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ ಮಾತ್ರವಲ್ಲದೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಆದಷ್ಟು ಬೇಗ ಮಧ್ಯಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೆಯೇ ಪೌರತ್ವ ಕಾಯ್ದೆಯಲ್ಲಿ ಮಾಡಿದ ತಿದ್ದು ಪಡಿಯಂತೆ ಅಲ್ಪ ಸಂಖ್ಯಾತ ಹಾಗೂ ಅಸಹಾಯಕ ಬಾಂಗ್ಲಾ ದೇಶದ ಹಿಂದೂಗಳನ್ನು ಆದಷ್ಟು ಶೀಘ್ರವಾಗಿ ಭಾರತಕ್ಕೆ ಕರೆತಂದು ಅವರಿಗೆ ಪುನರ್ವಸತಿಯನ್ನು ಕಲ್ಪಿಸಿ, ಈ ದೇಶದ ಪೌರತ್ವವನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು.
ಇದಕ್ಕೆ ಸಂಬಂಧಿಸಿದಂತೆ ಭಾರತ ದೇಶಕ್ಕೆ ನಿರಂತರ ಅಕ್ರಮವಾಗಿ ನುಸುಳುತ್ತಿರುವ ರೋಹಿಂಗ್ಯ ಮುಸ್ಲಿಮರು ಪ್ರಸಕ್ತ ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಬಹಳ ಅಪಾಯಕಾರಿಯಾಗಬಹುದು, ವಿಶ್ವದಲ್ಲಿ ಭಾರತವು ಒಂದೇ ಹಿಂದೂ ರಾಷ್ಟ್ರವಾಗಿದ್ದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮತಾಂಧ ಅನ್ಯಧರ್ಮೀಯರ ಅಟ್ಟಹಾಸಕ್ಕೆ ನಮ್ಮ ನಿರ್ದೋಷಿ ತಾಯಂದಿರು, ಅಕ್ಕತಂಗಿಯರು ಹಿಂದೂ ಸಮಾಜ ಬಾಂಧವರು ಬಲಿಯಾಗದಂತೆ ತಡೆಯುವ ಜವಾಬ್ದಾರಿಯು ಬಹುಸಂಖ್ಯಾತ ಹಿಂದೂಗಳು ಮತದಾನ ಮಾಡಿ ಚುನಾಯಿಸಿದಂತಹ ನಮ್ಮ ಕೇಂದ್ರ ಸರಕಾರದ ಪ್ರಥಮ ಆದ್ಯತೆ ಆಗಿರಬೇಕು ಎಂದು ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೋಹನ್ ಭಟ್, ಜಿಕೇಷ್, ಕುಮಾರಸ್ವಾಮಿ, ಸುಧೀರ್ ಪೂಜಾರಿ, ಶ್ರೀಧರ್ ಬಿಜೂರ್, ನವೀನ್ ಕೊಡ್ಗಿ, ರಾಜ್ ಗೋಪಾಲ್, ಸಂದೀಪ್ ಮತ್ತು ಇತರರು ಉಪಸ್ಥಿತರಿದ್ದರು.