ಮಂಗಳೂರು ನ 21: ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಕ್ಕೆ ತೆರಳಿ ಗೃಹ ಬಂಧನದಲ್ಲಿ ಸಿಲುಕಿಕೊಂಡಿದ್ದ ವಾಮಂಜೂರಿನ ವಿಜಯ( 44) ಕೊನೆಗೂ ಭಾರತಕ್ಕೆ ವಾಪಸಾಗಿದ್ದಾರೆ. ಇದೀಗ ಇವರ ಆಗಮನದಿಂದ ಮನೆಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ನ 26 ರ ಭಾನುವಾರ ದಮಾಮ್ ಮುಂಬೈ ಮಾರ್ಗವಾಗಿ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಜಯ 2015ರಲ್ಲಿ ಸೌದಿ ಅರೇಬಿಯದ ದಮಾಮ್ ಗೆ ತೆರಳಿದ್ದರು. ಬಡ ಕುಟುಂಬಕ್ಕೆ ಆರ್ಥಿಕ ಆಸರೆಯಾಗಲು ತೆರಳಿದ ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು ನಂತರದ ದಿನಗಳಲ್ಲಿ ವಿಜಯಾರವರು ಸರಿಯಾಗಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಿಂದಾಗಿ ಅನಾರೋಗ್ಯ ಪೀಡಿತ ಪತಿ ಬಾಲಪ್ಪ ಬಾಲಕೃಷ್ಣ ಮತ್ತು ಮಗ ಜಗಜೀವನ್ ಸಾಕಷ್ಟು ಸಂಕಟ ಮತ್ತು ಆತಂಕಕ್ಕೊಳಗಾಗಿದ್ದರು.ಈ ಬಗ್ಗೆ ಎಸ್ ಡಿಪಿಐ, ಇಂಡಿಯನ್ ಸೋಶಿಯಲ್ ಫೋರಮ್ ನ ಗಮನಕ್ಕೂ ತಂದಿತ್ತು. ಹೀಗಾಗಿ ಪ್ರಕರಣವು ಭಾರತೀಯ ರಾಯಭಾರ ಕಚೇರಿಯಲ್ಲಿ ದಾಖಲಾಗಿ ಅವರ ಬಿಡುಗಡೆಗಾಗಿ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ನ ಸದಸ್ಯರಾದ ನಾಸಿರ್ ಉಳಾಯಿಬೆಟ್ಟು, ಸಲೀಂ ಮೂಡಿಗೆರೆ , ಅತ್ತಾವುಲ್ಲಾ ಜೋಕಟ್ಟೆ ಮುಂತಾದವರ ತಂಡ ಶ್ರಮಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ದಮಾಮ್ ವಿಮಾನ ನಿಲ್ದಾಣದ ಎಮಿಗ್ರೇಶನ್ ವರೆಗೂ ಕರೆದುಕೊಂಡು ಬಂದ ಸೌದಿ ಪ್ರಾಯೋಜಕ ವಿಜಯಾರನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾನೆ.