ಬಂಟ್ವಾಳ, ಆ.08(DaijiworldNews/AK): ಬಂಟ್ವಾಳ ತಾಲೂಕಿನ ತುಂಬೆ, ಗೂಡಿನ ಬಳಿ,ಅಮ್ಮುಂಜೆ ಹಾಗೂ ವಿಟ್ಲ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಗುಡ್ಡಗಳು ಕುಸಿತ ಆಗಿರುವ ಬಗ್ಗೆ ಅಧ್ಯಯನ ನಡೆಸಲು ಜಿಯೋಲಾಜಿಕಲ್ ಸರ್ವೇ ಅಪ್ ಇಂಡಿಯಾ ಇದರ ಇಬ್ಬರು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಹಶಿಲ್ದಾರ್ ಅರ್ಚನಾ ಭಟ್ ಮಾತನಾಡಿ, ಜಿ.ಎಸ್.ಐ.ವಿಜ್ಞಾನಿಗಳು ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಗುಡ್ಡ ಜರಿತದ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಜ್ಞಾನಿಗಳು ಜಿಲ್ಲಾಧಿಕಾರಿ ಅವರಿಗೆ ವರದಿಯನ್ನು ನೀಡಲಿದ್ದಾರೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ವಿಪತ್ತು ಪ್ರಾಧಿಕಾರದ ತಾಂತ್ರಿಕ ಸಲಹೆಗಾರ ವಿಜಯ್ ಕುಮಾರ್, ಹಿರಿಯ ಭೂ ವಿಜ್ಞಾನಿಗಳಾದ ಸೆಂಥಿಲ್ ಕುಮಾರ್, ಸೋವೇಶ್ ಕಿರಿಯ ಇಂಜಿನಿಯರ್ ಯಶವಂತ, ಕಂದಾಯ ನಿರೀಕ್ಷಕರುಗಳಾದ ವಿಜಯ್, ಜನಾರ್ದನ, ಗ್ರಾಮ ಆಡಳಿತ ಅಧಿಕಾರಿ ಕರಿಬಸಪ್ಪ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಸದಾಶಿವ ಕೈಕಂಬ ಹಾಜರಿದ್ದರು.