Karavali
ವಿಶ್ವ ಸ್ತನಪಾನ ಸಪ್ತಾಹ: ಸ್ತನಪಾನ ಮತ್ತುಆರೈಕೆ ಕುರಿತ ಜಾಗೃತಿ
- Thu, Aug 08 2024 05:56:38 PM
-
ಮಂಗಳೂರು, ಆ.08(DaijiworldNews/AK): ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಬಾಟಲಿ ಹಾಲು ಹೊಟ್ಟೆ ತುಂಬಿಸುತ್ತದೆ. ಆದರೆ ಎದೆಹಾಲು ಆತ್ಮವನ್ನು ತೃಪ್ತಿಗೊಳಿಸುತ್ತದೆ. ಸ್ತನಪಾನವು ಮಗುವಿಗೆ, ಜಗತ್ತಿಗೆ ಹಾಗೂ ತನಗೆ ತಾನೇ ತಾಯಿಯು ನೀಡುವ ಕೊಡುಗೆ/ವರದಾನವಾಗಿದೆ. ಮೊಲೆಹಾಲು ಉಣಿಸುವುದು ಅಥವಾ ಸ್ತನಪಾನ ಒಂದು ನೈಸರ್ಗಿಕ ಪ್ರಕ್ರಿಯೆ. ಹುಟ್ಟಿದ ಮೊದಲ ಆರು ತಿಂಗಳುಗಳಲ್ಲಿ ಮಗುವಿಗೆ ಕೇವಲ ಎದೆಹಾಲು ಮಾತ್ರ ಕೊಡಬೇಕು. ಮಕ್ಕಳ ಆರೋಗ್ಯ ಎದೆಹಾಲುಣಿಸುವುದರ ಮೇಲೆ ಆಧಾರಿತವಾಗಿದೆ.
ಮೊಲೆಹಾಲುಣಿಸುವುದರಿಂದ ತಾಯಿ, ಮಗು ಹಾಗೂ ಕುಟುಂಬಕ್ಕೆ ಅನೇಕ ಪ್ರಯೋಜನಗಳಿವೆ. ಇದನ್ನು ಮನಗಂಡು "ವರ್ಲ್ದ್ ಅಲಯನ್ಸ್ ಫಾರ್ ರ್ಬ್ರೆಸ್ಟ್ಫೀಡಿಂಗ್ ಆಕ್ಷನ್" ಎಂಬ ಜಾಗತಿಕ ಸಂಸ್ಥೆ ಸ್ತನಪಾನದ ಬಗ್ಗೆ ಪ್ರಚಾರ ಮಾಡಲು ಪ್ರತೀವರ್ಷ ಆಗಸ್ಟ್ ತಿಂಗಳ ಮೊದಲನೇ ವಾರವನ್ನು "ವಿಶ್ವ ಸ್ತನಪಾನ ಸಪ್ತಾಹ" ವಾಗಿ ಆಚರಿಸುತ್ತದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯೂನಿಸೆಫ್ ಸಂಸ್ಥೆಗಳು ಬೆಂಬಲಿಸುತ್ತವೆ.
ವಿಶ್ವದೆಲ್ಲೆಡೆ ಈ ಸಪ್ತಾಹವನ್ನು ಆಚರಿಸಿ ಸ್ತನಪಾನದ ಬಗ್ಗೆ ಜಾಗೃತಿ ಉಂಟು ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತದೆ. ಪ್ರತಿವರ್ಷವೂ ಒಂದೊಂದು ಧ್ಯೇಯದೊಂದಿಗೆ ಇದನ್ನು ಆಚರಿಸಲಾಗುತ್ತದೆ.
ಈ ವರ್ಷದ ಧ್ಯೇಯ- "Closing the gap: breastfeeding support for all” (ಅಂತರ ಕೊನೆಗೊಳಿಸಿ: ಎಲ್ಲರಿಗೂ ಸ್ತನಪಾನಕ್ಕೆ ಬೆಂಬಲ.) ಸ್ತನಪಾನದ ಪ್ರಚಾರ ಎಲ್ಲಾ ಹಾಲುಣಿಸುವ ತಾಯಂದಿರಿಗೆ ಪೂರಕವಾಗಿದೆ. ಅಂತೆಯೇ ಕುಟುಂಬ ಹಾಗೂ ಸಾಮಾಜಿಕ ಬೆಂಬಲವನ್ನೂ ತಾಯಂದಿರಿಗೆ ಸಿಗುವಂತೆ ಮಾಡುವುದು.
ಸ್ತನಪಾನ ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಗುವಿಗೆ ಅಗತ್ಯವಾದ ಎಲ್ಲಾ ಪೌಷ್ಟಿಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ, ಸುಲಭವಾಗಿ ಜೀರ್ಣವಾಗುವ ರೀತಿಯಲ್ಲಿ ಒದಗಿಸುತ್ತದೆ. ಮಗುವಿನಲ್ಲಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿ, ವಿವಿಧ ರೋಗರುಜಿನ ಹಾಗೂ ಅಲರ್ಜಿಗಳಿಂದ ರಕ್ಷಿಸುತ್ತದೆ. ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಒಳಗೊಂಡಿದೆ.
ನಾರ್ಮಲ್ಹೆರಿಗೆಯಾದಲ್ಲಿ ಅರ್ಧಗಂಟೆಯೊಳಗೆ ಹಾಗೂ ಸಿಸೇರಿಯನ್ ಆದಲ್ಲಿ 1-2 ಗಂಟೆಯೊಳಗೆ ಎದೆಹಾಲುಣಿಸಲು ಪ್ರಾರಂಭಿಸಬೇಕು. ಮಗುವಿಗೆ ಆರು ತಿಂಗಳಕಾಲ ತಾಯಿಯ ಎದೆಹಾಲು ಮಾತ್ರವೇ ಸಾಕು. ನೀರನ್ನೂ ಕೊಡುವ ಆವಶ್ಯಕತೆ ಇರುವುದಿಲ್ಲ. ಮೊದಲ 2-3 ದಿನಗಳಲ್ಲಿ ಸ್ರವಿಸುವ ಹಾಲನ್ನು ಕೊಲೊಸ್ಟ್ರಮ್(Colostrum) ಎನ್ನುತ್ತಾರೆ. ಇದರಲ್ಲಿ ಮಗುವಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಹಾಗೂ ರೋಗನಿರೋಧಕ ಅಂಶಗಳು ಅಧಿಕವಾಗಿವೆ. ಇದು ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದುದರಿಂದ ಕೊಲೊಸ್ಟ್ರಮ್ ಅನ್ನು ತಪ್ಪದೇ ನೀಡಬೇಕು. ಆರು ತಿಂಗಳ ನಂತರ ಎದೆಹಾಲಿನೊಂದಿಗೆ ಇತರ ಆಹಾರ ಕೊಡಬಹುದು. ಮಗುವಿಗೆ ಎರಡು ವರ್ಷ ತುಂಬುವವರೆಗೆ ಎದೆಹಾಲುಉಣಿಸುವುದು ಉತ್ತಮ. ಸ್ತನಪಾನ ಮಾಡಿದ ಮಕ್ಕಳ ಬುದ್ಧಿಶಕ್ತಿ ಉತ್ತಮವಾಗಿರುತ್ತದೆ. ಬೊಜ್ಜಿನ ಸಮಸ್ಯೆ ಕಡಿಮೆ ಹಾಗೂ ಮುಂದಿನ ದಿನಗಳಲ್ಲಿ ಡಯಾಬಿಟಿಸ್ ನಂತಹ ಕಾಯಿಲೆ ಬರುವ ಸಾಧ್ಯತೆಯೂ ಅಲ್ಪವಾಗಿರುತ್ತದೆ.
ಹಾಲುಣಿಸುವುದರಿಂದ ತಾಯಿಗೂ ಹಲವು ಪ್ರಯೋಜನಗಳಿವೆ. ಸ್ತನಪಾನ ಮಾಡಿಸುವ ಮಹಿಳೆಯರಿಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್, ಬೊಜ್ಜಿನ ಸಮಸ್ಯೆಗಳು ಕಡಿಮೆಯಾಗುತ್ತದೆ.ಸ್ತನಪಾನ ನೈಸರ್ಗಿಕ ಕ್ರಿಯೆಯಾದರೂ, ಮೊದಲ ಬಾರಿಗೆ ತಾಯಿಯಾದವರು ಎದೆಹಾಲು ಉಣಿಸಲು ಕೆಲವು ಸವಾಲುಗಳನ್ನು ಎದುರಿಸುತ್ತಾರೆ. ಕೆಲವು ಸುರಕ್ಷತೆಯ ಕ್ರಮಗಳನ್ನು ಪಾಲಿಸುವ ಮೂಲಕ ಪರಿಣಾಮಕಾರಿಯಾಗಿ ಸ್ತನಪಾನ ಮಾಡಿ ಮಗುವಿಗೂ ಹಾಗೂ ತಾಯಿಗೂ ಅದರ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಅಂತಹ ಸುರಕ್ಷತೆಯ ಕ್ರಮಗಳು ಈ ಕೆಳಗಿನಂತಿವೆ.
ತಾಯಿ ಸ್ತನಪಾನವನ್ನು ಪ್ರಾರಂಭಿಸುವ ಮೊದಲು ತನ್ನ ಕೈಯನ್ನು ಸೋಪು ಹಾಗೂ ನೀರಿನಿಂದ ಸ್ವಚ್ಚಗೊಳಿಸಬೇಕು. ಮೊಲೆಯನ್ನು ಬಿಸಿನೀರಿನಲ್ಲಿ ತೊಳೆದು ಸ್ವಚ್ಚಗೊಳಿಸಬೇಕು. ಇದರಿಂದ ಮಗುವನ್ನು ಸೋಂಕಿನಿಂದ ರಕ್ಷಿಸಬಹುದು.
ಹಾಲುಣಿಸುವಾಗ ಮೊಲೆಯ ಮೇಲೆ ಮಗು ವಿನಸರಿಯಾದ ಹಿಡಿತ ತುಂಬಾ ಅಗತ್ಯ. ಮೊಲೆ ಚೀಪುವಾಗ ಮೊಲೆತೊಟ್ಟಿನ ಸುತ್ತಲಿನ ಕಪ್ಪುಭಾಗದ ಹೆಚ್ಚಿನ ಅಂಶ ಮಗುವಿನ ಬಾಯಿಯಲ್ಲಿರಬೇಕು. ಇದರಿಂದ ತಾಯಿಗೂ ನೋವಾಗುವುದಿಲ್ಲ ಮತ್ತು ಉತ್ತಮ ರೀತಿಯಲ್ಲಿ ಹಾಲು ಮಗುವಿಗೆ ಸಿಗುತ್ತದೆ. ಮಗುವಿನ ದೇಹ ಹಾಗೂ ತಲೆಯನ್ನು ನೇರವಾಗಿ ನಿಮ್ಮ ದೇಹಕ್ಕೆತಾಗಿ ಹಿಡಿಯಿರಿ. ಮಗುವಿನ ಮುಖವು ನಿಮ್ಮ ಮೊಲೆಯ ಸಂಪರ್ಕದಲ್ಲಿರಲಿ. ಮಗುವಿನ ಬಾಯಿಯು ಅಗಲವಾಗಿ ತೆರೆದಿರಲಿ. ಮೊಲೆಯ ತೊಟ್ಟು ಹಾಗೂ ಸುತ್ತಲಿನ ಕಪ್ಪುಭಾಗ ಮಗುವಿನ ಬಾಯಿಯಲ್ಲಿರಲಿ. ಮಗುವಿನ ಗದ್ದವು ಮೊಲೆಗೆತಗಲಿರಲಿ. ಇಂತಹ ಹಿಡಿತದಿಂದ ಸ್ತನಪಾನವು ಸಮರ್ಪಕವಾಗುತ್ತದೆ.
ಮಗುವನ್ನು ಅನುಕೂಲಕರವಾದ ರೀತಿಯಲ್ಲಿ ಹಿಡಿದು ಹಾಲುಣಿಸಬೇಕು. ಇದರಿಂದ ತಾಯಿಗೂ ಹಾಲುಣಿಸಲು ಸುಲಭವಾಗುತ್ತದೆ. ಬೆನ್ನು ನೋವು ಮುಂತಾದ ಸಮಸ್ಯೆಗಳು ಉಂಟಾಗುವುದಿಲ್ಲ.
ತಾಯಿಯು ತನ್ನ ಅನುಕೂಲದಂತೆ ವಿವಿಧ ಆಸನಗಳಲ್ಲಿ ಹಾಲುಣಿಸಬಹುದು. ಇವುಗಳಲ್ಲಿ ಕುಳಿತುಕೊಂಡು ಹಾಲುಣಿಸುವುದು ಉತ್ತಮ. ಬೇಕಾದಲ್ಲಿ ತಲೆದಿಂಬನ್ನು ಅಧಾರ / ಆಸರೆಯಾಗಿ ಉಪಯೋಗಿಸಬಹುದು.
ಸಾಕಷ್ಟು ಎದೆಹಾಲು ಸಿಕ್ಕ ಮಗು ಚೆನ್ನಾಗಿ ನಿದ್ರಿಸುತ್ತದೆ. ದಿನಕ್ಕೆ 6-8 ಬಾರಿ ಮೂತ್ರವಿಸರ್ಜನೆ ಮಾಡುತ್ತದೆ. ಮಲವಿಸರ್ಜನೆಯೂ ಸರಿಯಾಗಿ ಮಾಡುತ್ತದೆ. ಮಗುವಿನ ತೂಕ ನಿಯಮಿತವಾಗಿ ಹೆಚ್ಚಾಗುತ್ತದೆ. ಮಗು ಜಾಸ್ತಿ ಅಳದೆ ಆರಾಮವಾಗಿ ಇರುತ್ತದೆ.
ಹಾಲುಣಿಸುವ ತಾಯಂದಿರಲ್ಲಿ ಸ್ತನದ ಊತ ಹಾಗೂ ನೋವು ಉಂಟಾಗಬಹುದು. ಇದನ್ನು ತಡೆಗಟ್ಟಲು ಮಗುವಿಗೆ ಸರಿಯಾದ ರೀತಿಯಲ್ಲಿ ಎರಡು ಗಂಟೆಗಳಿಗೊಮ್ಮೆ ಸರಿಯಾದ ಪ್ರಮಾಣದಲ್ಲಿ ಹಾಲುಣಿಸಬೇಕು. ಸ್ತನಗಳಿಗೆ ಬಿಸಿನೀರಿನ ಶಾಖ ನೀಡಿ ಮಗುವಿಗೆ ಬೇಕಾದಷ್ಟು ಹಾಲುಣಿಸಿ ಮತ್ತೂ ಉಳಿದಲ್ಲಿ ಹಾಲನ್ನು ಹಿಂಡಿತೆಗೆಯಬೇಕು. ಇದರೊಂದಿಗೆ ಫ್ರಿಡ್ಜ್ನಲ್ಲಿಟ್ಟ ತಂಪು ಕ್ಯಾಬೇಜ್ ಎಲೆಗಳನ್ನು ಊತವಿರುವ ಸ್ತನದ ಮೇಲೆ ಇಡುವುದರಿಂದ ಸ್ತನದ ಉರಿಯೂತ ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿಸಲಾಗಿದೆ.
ಎದೆಹಾಲು ಉಣಿಸುವ ತಾಯಂದಿರಲ್ಲಿ ಕಂಡು ಬರುವ ಇನ್ನೊಂದು ಸಮಸ್ಯೆಯೆಂದರೆ ಮೊಲೆತೊಟ್ಟು ಒಡೆಯುವುದು. ಈ ಸಂದರ್ಭದಲ್ಲಿ ತಾಯಿಯು ಹಾಲನ್ನು ಹಿಂಡಿತೆಗೆದು ಮಗುವಿಗೆ ಚಮಚದಿಂದ ಕೊಡಬೇಕು. ಹಿಂಡಿ ತೆಗೆದ ಹಾಲನ್ನು ಒಡೆದ ಸ್ತನತೊಟ್ಟಿಗೆ ಹಚ್ಚಬಹುದು. ಇದರ ಜೊತೆಗೆ ವೈದ್ಯರ ಸಲಹೆಯಂತೆ ಮುಲಾಮು ಹಚ್ಚಬಹುದು.
ಸ್ತನಪಾನ ನಿಮಗೂ, ನಿಮ್ಮ ನವಜಾತ ಶಿಶುವಿಗೂ ಹೊಸ ಅನುಭವ. ಆದುವುದರಿಂದ ಕೆಲವೊಂದು ತಾಯಂದಿರು ಹಾಗೂ ಶಿಶುಗಳಿಗೆ ಇದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು. ಅಂತಹ ಸಮಯದಲ್ಲಿ ತಾಳ್ಮೆಯಿಂದ ಇರುವುದು ಮುಖ್ಯ. ತಾಯಂದಿರು ಒತ್ತಡ ಅನುಭವಿಸಿದರೆ ಎದೆಹಾಲುಣಿಸುವುದು ಕಷ್ಟಕರವಾಗಬಹುದು. ಸಮಾಧಾನದಿಂದ ಪುನಃಪ್ರಯತ್ನಿಸುವುದರಿಂದ ಎದೆಹಾಲುಣಿಸುವ ಕ್ರಿಯೆ ಸಮರ್ಪಕವಾಗಬಲ್ಲದು.
ತಾಯಿಗೆ ಶೀತ, ಕೆಮ್ಮು, ಜ್ವರ ಮುಂತಾದ ಆರೋಗ್ಯ ಸಮಸ್ಯೆಗಳಿದ್ದರೆ ಎದೆಹಾಲುಣಿಸುವುದನ್ನು ನಿಲ್ಲಿಸಬೇಡಿ. ತಾಯಿಯು ಮಾಸ್ಕ್ಧರಿಸುವುದು, ಕೈಯನ್ನು ಸ್ವಚ್ಚವಾಗಿ ತೊಳೆಯುವುದು ಮುಂತಾದ ಮುಂಜಾಗ್ರತಕ್ರಮಗಳನ್ನು ಪಾಲಿಸಿಕೊಂಡು ಸ್ತನಪಾನ ಮಾಡಬಹುದು.
ಕೆಲಸಕ್ಕೆ ಹೋಗುವ ತಾಯಂದಿರು ಎದೆಹಾಲನ್ನು ಹಿಂಡಿ ಶೇಖರಿಸಿ ಇಡಬಹುದು. ಸ್ವಚ್ಚ ಹಾಗೂ ಮುಚ್ಚಳವಿರುವ ಸ್ಟೀಲ್ಪಾತ್ರೆಗಳನ್ನು ಬಳಸಬೇಕು. 3-4 ಗಂಟೆ ಹಾಲನ್ನು ಹೊರಗಡೆ, 24 ಗಂಟೆ ಫ್ರಿಜ್ನಲ್ಲಿ ಹಾಗೂ 3-4 ತಿಂಗಳು ಫ್ರೀಝರ್ನಲ್ಲಿ ಶೇಖರಿಸಿ ಇಡಬಹುದು. ಈ ಹಾಲು ಮಗುವಿಗೆ ಕೊಡಬೇಕಾದಲ್ಲಿ ಹಾಲಿರುವ ಪಾತ್ರೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಹೊತ್ತು ಮುಳುಗಿಸಿ ಇಟ್ಟು ನಂತರ ಚಮಚದಲ್ಲಿ ನೀಡಬೇಕು. ಇದಕ್ಕಾಗಿ ಉಪಯೋಗಿಸುವ ಎಲ್ಲಾ ಪಾತ್ರೆಗಳನ್ನು ಬಿಸಿ ನೀರಲ್ಲಿ ಕುದಿಸಿ ಸ್ವಚ್ಚತೆ ಕಾಪಾಡಬೇಕು.ಈ ಸಲಹೆಗಳನ್ನು ಗಮನದಲ್ಲಿರಿಸಿದರೆ ತಾಯಿ ಮತ್ತು ಮಗುವಿಗೆ ಸ್ತನಪಾನವು ಒಳ್ಳೆಯ ಅನುಭವವಾಗಿ ಆರೋಗ್ಯವನ್ನು ನೀಡುತ್ತದೆ. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ಸಹಾಯ ಮಾಡುತ್ತದೆ.ಮಗುವಿಗೆ ಹಾಲುಣಿಸಿದ ನಂತರ ತೇಗು ಬರಿಸುವುದು ತುಂಬಾ ಅಗತ್ಯ. ಹಾಲುಣಿಸುವಾಗ ಮಗುವಿನ ಹೊಟ್ಟೆಗೆ ಗಾಳಿಯೂ ಹೋಗುತ್ತದೆ. ತೇಗುಬರಿಸದಿದ್ದರೆ ವಾಂತಿ, ಹೊಟ್ಟೆನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ.ಮಗು ಮಲಗಿದ್ದಾಗ ವಾಂತಿಯಾದ ಹಾಲುಶ್ವಾಸಕೋಶಕ್ಕೆ ಹೋಗಿ ಉಸಿರಾಟದ ತೊಂದರೆ ಆಗಬಹುದು.
ಒಂದು ಮೊಲೆ ಹಾಲನ್ನು ಮಗು ಸಂಪೂರ್ಣವಾಗಿ ಕುಡಿದ ಅನಂತರ ಇನ್ನೊಂದು ಮೊಲೆಯನ್ನು ನೀಡಬೇಕು. ಕೊನೆಯಲ್ಲಿ ಬರುವ ಹಾಲು ಹೈಂಡ್ಮಿಲ್ಕ್ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಮಗುವಿಗೆ ಹಸಿವಾಗಿರುವುದನ್ನು ಗುರುತಿಸಿ ಸ್ತನಪಾನ ಮಾಡಬೇಕು. ಇದನ್ನು ಡಿಮಾಂಡ್ಫೀಡ್ ಎನ್ನುತ್ತಾರೆ.
ಪ್ಯಾಸಿಫೈಯರ್ಹಾಗೂ ಫೀಡಿಂಗ್ಬಾಟಲ್ಗಳನ್ನು ಉಪಯೋಗಿಸಬಾರದು. ಇದರಿಂದ ಮೊಲೆ ತೊಟ್ಟಿನ ಬಗ್ಗೆ ಗೊಂದಲ (ನಿಪ್ಪಲ್ಕನ್ಫ್ಯೂಷನ್)ಉಂಟಾಗುತ್ತದೆ.ತಾಯಿ ಕಾಟನ್ ಉಡುಪುಗಳನ್ನು ಧರಿಸಬೇಕು. ಬೆವರಿದರೆ ಮೊಲೆತೊಟ್ಟನ್ನು ಬಿಸಿನೀರಲ್ಲಿ ಅದ್ದಿದಬಟ್ಟೆಯಿಂದ ಸ್ವಚ್ಚಗೊಳಿಸಬೇಕು. ಲೋಶನ್ ಮತ್ತು ಕ್ರೀಮ್ಗಳನ್ನು ಹಚ್ಚುವ ಅಗತ್ಯವಿಲ್ಲ. ತಾಯಿ ಆರೋಗ್ಯಕರ, ಪೋಷಕಾಂಶ ಭರಿತ ಆಹಾರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು. ತಾಯಿ ಅಪಸ್ಮಾರ, ಮಾನಸಿಕ ಕಾಯಿಲೆಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಸ್ತನಪಾನದ ಕುರಿತು ವೈದ್ಯರ ಸಲಹೆ ಪಡೆಯಬೇಕು. ಎದೆಹಾಲು ಉಣಿಸುವಾಗ ತೊಂದರೆಗಳು ಕಂಡು ಬಂದರೆ ವೈದ್ಯರು ಅಥವಾ ಆರೋಗ್ಯ ಸಿಬಂದಿಯ ಸಲಹೆ ಪಡೆಯಿರಿ.
ಲೇಖಕರು: ಡಾ. ಪ್ರಿಯಾರೇಶ್ಮಾ ಅರಾನ್ಹ, ಪ್ರಾಧ್ಯಾಪಕರು, ಮಕ್ಕಳ ಶುಶ್ರೂಷಾ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಮಂಗಳೂರು