ಮಂಗಳೂರು, ಆ.07(DaijiworldNews/AA): ನಗರದ ಪ್ರಮುಖ ಸ್ಥಳಗಲ್ಲಿ ಬೀದಿಬದಿ ವ್ಯಾಪಾರ ನಡೆಸುವವರ ಮೇಲೆ ಮಂಗಳೂರು ಮಹಾನಗರ ಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರನೆ ವಿರೋಧಿಸಿ ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಿಗಳ ಸಂಘವು ಇತರ ಸಮಾನ ಮನಸ್ಕ ಸಂಘಗಳ ಸಹಯೋಗದಲ್ಲಿ ಇಂದು ಪ್ರತಿಭಟನೆ ನಡೆಯಿತು.
ನಗರದ ಪಿವಿಎಸ್ ವೃತ್ತದಿಂದ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕಚೇರಿವರೆಗೆ ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿದರು. ಪ್ರತಿಭಟೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗಿಯಾಗಿದ್ದು, ಪ್ರತಿಭಟನಾಕಾರರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಾಲಿಕೆ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಪಟ್ಟಣ ವ್ಯಾಪಾರ ಸಮಿತಿ ಸಭೆ ನಡೆಸದೆ ಟೈಗರ್ ಕಾರ್ಯಾಚರಣೆ ಮಾಡುವುದು ಕಾನೂನು ಬಾಹಿರವಾಗಿದೆ. ಇನ್ನು ಟೈರ್ ಕಾರ್ಯಾಚರಣೆ ವೇಳೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳೊಂದಿಗೆ ಅನಾಗರಿಕವಾಗಿ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮೇಯರ್ ಸುಧೀರ್ ಶೆಟ್ಟಿ ಕೂಡ ಒಬ್ಬ ಬೀದಿಬದಿ ವ್ಯಾಪಾರಿ ಮಗ ಎಂಬುದು ನೆನಪಿರಲಿ. ಇದೀಗ ನೀವು ಮೇಯರ್ ಆಗಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿರುವುದು ಅಮಾನವೀಯ. ಮೇಯರ್ ಹೇಳಿರುವಂತೆ ಒಬ್ಬರಿಗೆ ಇನ್ನೂರು ತಳ್ಳುಗಾಡಿಗಳಿವೆ ಎಂಬುದನ್ನು ಸಾಬೀತುಪಡಿಸಿ, ನಾವು ಹೋರಾಟ ಕೈ ಬಿಡುತ್ತೇವೆ. 10 ಕಡೆ ವ್ಯಾಪಾರ ವಲಯ ಸ್ಥಾಪಿಸಲು ಪ್ರಸ್ತಾಪ ಸಲ್ಲಿಸಿದ್ದು ಬೀದಿಬದಿ ಸಂಘಟನೆ. ನಿಮ್ಮ ಪ್ರಯತ್ನ ಅಲ್ಲ ಎಂದರು.
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಯಾದವ ಶೆಟ್ಟಿ ಅವರು, ಮಂಗಳೂರು ಪಾಲಿಕೆ ವ್ಯಾಪ್ತಿಯು ಮನಪಾ ಮೇಯರ್ ಅಥವಾ ಸದಸ್ಯರ ಪಿತ್ರಾರ್ಜಿತ ಆಸ್ತಿ ಅಲ್ಲ. ಇದು ನಮ್ಮಭೂಮಿ. ಬೀದಿಬದಿ ವ್ಯಾಪಾರ ನಮ್ಮ ಹಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾನ ಮನಸ್ಕ ಸಂಘಟನೆಯ ಪ್ರಮುಖರಾದ ಮಂಜುಳಾ ನಾಯಕ್ ಮಾತನಾಡಿ, ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಹರಿಹಾಯ್ದರು. ಜೊತೆಗೆ ಶಾಸಕರಿಗೆ ತಾಕತ್ತಿದ್ದರೆ ಎಲ್ಲರಿಗೆ ಕೆಲಸ ಕೊಡಿಸಲಿ. ಅವರು ಬೀದಿ ವ್ಯಾಪಾರ ನಿಲ್ಲಿಸುತ್ತಾರೆ. ಇದು ದಕ ಜಿಲ್ಲೆ. ಇಲ್ಲಿ ಬಿಜೆಪಿಯ ಉತ್ತರ ಪ್ರದೇಶ ಮಾದರಿ ನಡೆಯದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎಂ.ದೇವದಾಸ್, ಕರುಣಾಕರ್, ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ವಿ. ಕುಕ್ಯಾನ್, ಸೀತಾರಾಂ ಬೇರಿಂಜ, ಮುಹಮ್ಮದ್ ಕುಂಜತ್ತಬೈಲ್, ಸಂತೋಷ್ ಕುಮಾರ್ ಬಜಾಲ್, ನವೀನ್ ಕೊಂಚಾಡಿ, ರಿಝಾನ್ ಹರೇಕಳ, ಮೀನಾ ಟೆಲ್ಲಿಸ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುರೇಶ್ ಕುಮಾರ್, ಶೇಖರ್, ದಯಾನಂದ್ ಶೆಟ್ಟಿ, ಕವಿತಾ ವಾಸು, ಜಯಂತಿ ಶೆಟ್ಟಿ, ಭಾರತಿ ಬೋಳಾರ್, ಮಂಜುಳಾ ನಾಯಕ್, ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಮುಸ್ತಫ, ಸುನೀಲ್ ಕುಮಾರ್ ಬಜಾಲ್ ಮೊದಲಾದವರು ಭಾಗಿಯಾಗಿದ್ದರು.