ಪಡುಬಿದ್ರಿ,ಆ.07(DaijiworldNews/AA): ಹೆಜಮಾಡಿ ಹಳೇ ಎಂಬಿಸಿ ರಸ್ತೆ ಟೋಲ್ ಪ್ಲಾಝಾದಲ್ಲಿ ಹೆದ್ದಾರಿ ಟೋಲ್ ಪಾವತಿಸದೇ ಚಾಲಕನೋರ್ವ ಕಾರನ್ನು ನುಗ್ಗಿಸಿದ್ದಾನೆ. ಈ ವೇಳೆ ಆತನನ್ನು ತಡೆದ ಟೋಲ್ ಸಿಬ್ಬಂದಿ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಪರಾರಿಯಾದ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 6 ರಂದು ಕೇಸ್ ದಾಖಲಾಗಿರುತ್ತದೆ.
ಬಂಟ್ವಾಳ ಮೂಲದ ಸಲೀಂ ಸುಂಕ ಪಾವತಿಸದೇ ತನ್ನ ಕಾರನ್ನು ಟೋಲ್ ಗೇಟಲ್ಲಿ ಬೆಳಿಗ್ಗಿನ 9-20ರ ಸುಮಾರಿಗೆ ನುಗ್ಗಿಸಿದ್ದಾನೆ. ಈ ವೇಳೆ ಟೋಲ್ ಸಿಬ್ಬಂದಿ ದೀಕ್ಷಿತ್ ಆತನನ್ನು ತಡೆದು ನಿಲ್ಲಿಸಿದ್ದಾನೆ. ಬಳಿಕ ದೀಕ್ಷಿತ್ ಮೇಲೆ ಕಾರನ್ನು ಅಪಾಯಕಾರಿಯಾಗಿ ಚಲಾಯಿಸಿ ಮುಂದಕ್ಕೊಯ್ದು ನಿಲ್ಲಿಸಿ ಹಿಂದೆ ಮರಳಿ ಬಂದ ಕಾರು ಚಾಲಕನು, ಸಿಬ್ಬಂದಿ ಮೇಲೆ ಕೈಯಿಂದ ಹಾಗೂ ಕೊಡೆಯಿಂದ ಹಲ್ಲೆ ನಡೆಸಿದ್ದಾನೆ. ಇದೀಗ ಬೆದರಿಸಿದ ವೀಡಿಯೋ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಆರೋಪಿಯ ಜಾಡು ಹಿಡಿದು ಉಡುಪಿಯತ್ತ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.