ಬಂಟ್ವಾಳ , ಆ.6(DaijiworldNews/AK): ಮನೆಮಂದಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಚಿನ್ನದ ಆಭರಣಗಳ ಸಹಿತ ನಗದನ್ನು ದೋಚಿದ ಘಟನೆ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಅಗರಿ ಎಂಬಲ್ಲಿ ನಡೆದಿದೆ.
ಅಗರಿ ನಿವಾಸಿ ಜಗನ್ನಾಥ್ ರವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದ್ದು, ಜಗನ್ನಾಥ್ರವರು ಕೆಲಸದ ನಿಮಿತ್ತ ವಿದೇಶದಲ್ಲಿದ್ದು ಮನೆಯಲ್ಲಿ ಅವರ ಪತ್ನಿ ವಿಜಯ ಜಗನ್ನಾಥ್ ಹಾಗೂ ಇಬ್ಬರು ಮಕ್ಕಳು ಮಾತ್ರ ಅಗರಿಯ ಮನೆಯಲ್ಲಿ ವಾಸವಾಗಿದ್ದರು.
ವಿಜಯ ತನ್ನ ಮಕ್ಕಳೊಂದಿಗೆ ಈಶ್ವರಮಂಗಲ ಪಂಚೋಡಿಯಲ್ಲಿರುವ ತಮ್ಮ ತವರು ಮನೆಗೆ ತೆರಳಿದ್ದು ಆ.4ರಂದು ಮರಳಿ ಮನೆಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು.
ಮನೆಯ ಎದುರು ಬಾಗಿಲನ ಬೀಗವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿತ್ತಿ. ಮನೆಯ ಒಳಗೆ ತೆರಳಿ ನೋಡಿದಾಗ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟನ್ನು ತೆರೆದು ಅದರ ಲಾಕರ್ ಅನ್ನು ಕಳ್ಳರು ಯಾವುದೋ ಸಾಧನದಿಂದ ಮುರಿದು, ಅದರಲ್ಲಿದ್ದ ಒಟ್ಟು 34 ಗ್ರಾಂ ನಷ್ಟು ಚಿನ್ನ ಹಾಗು 6000ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ವಿಜಯಕುಮಾರಿ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮನೆಯ ಒಂದು ಸಾಕುನಾಯಿಯೂ ಕಾಣೆಯಾಗಿದೆ ಎನ್ಬಲಾಗಿದ್ದು, ಹೆಚ್ಚಿನ ವಿವರ ತಿಳಿದುಬರಬೇಕಿದೆ.
ಕಳ್ಳತನವಾದ ಸೊತ್ತುಗಳ ಒಟ್ಟು ಮೌಲ್ಯ ರೂ 1,42,000 ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದು, ಶ್ವಾನದಳವನ್ನು ಕರೆಸಿ ತಪಾಸಣೆ ನಡೆಸಲಾಗಿದೆ.