ಉಳ್ಳಾಲ, ಆ.05(DaijiworldNews/AK):ಮಾನವ ಮಾನವನ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಮಾನವೀಯತೆಯ ಕೊಂಡಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ತಾಲೂಕಿನ ಪತ್ರಕರ್ತರು ಸಾಮಾಜಿಕ ಬದ್ಧತೆಯೊಂದಿಗೆ ಸೇವಾ ಕಾರ್ಯದಲ್ಲಿ ಭಾಗಿಯಾಗಿರುವುದು ಎಲ್ಲರಿಗೂ ಮಾದರಿ ಎಂದು ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಶೀತಲ್ ಅಂಗೂರ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉಳ್ಳಾಲ ಹಾಗೂ ಮಂಗಳೂರು ಪತ್ರಕರ್ತರ ಚಾರಣ ಬಳಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಉಳವರೆಯಲ್ಲಿ ಗುಡ್ಡ ಕುಸಿತದಿಂದ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ದಾನಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ತಲುಪಿಸುವ ವಾಹನಕ್ಕೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿಚಾಲನೆ ನೀಡಿ ಮಾತನಾಡಿದರು.
ಆರ್.ಎನ್ ಕಲೆಕ್ಷನ್ಸ್ ರಹೀಮ್ ಮಾತನಾಡಿ, ಶಿರೂರು ಘಟನೆ ದು:ಖಕರ, ಪತ್ರಕರ್ತರು ವೃದ್ಧೆಯ ಅಂತಿಮ ಸಂಸ್ಕಾರದಲ್ಲಿ ತೊಡಗಿಸಿಕೊಂಡಿದ್ದು ಮಾನವೀಯ ಕಾರ್ಯ. ಜಾತಿ ಪ್ರದೇಶ, ಭಾಷೆ ನೋಡದೆ ಕಷ್ಟದಲ್ಲಿರುವವರಿಗೆ ಸಹಕರಿಸುವುದು ದೇವರು ಮೆಚ್ಚುವ ಕಾರ್ಯ” ಎಂದರು.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಅತಿವೃಷ್ಠಿಯಿಂದಾಗಿ 25ಕ್ಕೂ ಹೆಚ್ಚು ಮನೆಮಂದಿ ಅನಾಥರಾಗಿರುವುದು ಖೇದಕರ. ಶಿರೂರು ದುರಂತದ ಸಂದರ್ಭ ಪತ್ರಕರ್ತರು ನಡೆಸಿದ ಮಾನವೀಯ ಕಾರ್ಯದಿಂದ ಅವರು ವರದಿಗೆ ಮಾತ್ರ ಸೀಮಿತವಲ್ಲ, ಸಾಮಾಜಿಕ ಚಟುವಟಿಕೆಗಳಿಗೂ ಪೂರಕವಾದವರು ಅನ್ನುವ ಅಭಿಪ್ರಾಯ ಮೂಡಿಸಿದೆ ಎಂದರು.
ಈ ಸಂದರ್ಭ ಕರಾವಳಿ ಎಂಟರ್ ಪ್ರೈಸಸ್ ನ ರಶೀದ್ ದೇರಳಕಟ್ಟೆ, ಯು.ಆರ್ ಫೌಂಡೇಷನ್ನಿನ ಉಸ್ಮಾನ್ ಎ.ಎಂ, ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷರುಗಳಾದ ದಿನೇಶ್ ನಾಯಕ್ ತೊಕ್ಕೊಟ್ಟು, ಆರೀಫ್ ಯು.ಆರ್., ಕೋಶಾಧಿಕಾರಿ ವಜ್ರ ಗುಜರನ್, ಜಿಲ್ಲಾ ಸಮಿತಿ ಸದಸ್ಯ ಮೋಹನ್ ಕುತ್ತಾರ್, ಪತ್ರಕರ್ತರ ಚಾರಣ ಬಳಗದ ಶಶಿ ಬೆಳ್ಳಾಯರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿವುಶಂಕರ್, ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್ ಉಪಸ್ಥಿತರಿದ್ದರು.
ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿ ನಿರೂಪಿಸಿದರು.ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ವಂದಿಸಿದರು.