ಕುಂದಾಪುರ, ಆ.05(DaijiworldNews/AK): ಇಡೀ ದೇಶಕ್ಕೆ ಪವರ್ ಲಿಪ್ಟಿಂಗ್ ಮೂಲಕ ಗೌರವ ತಂದುಕೊಟ್ಟ ಹಳ್ಳಿ ಪ್ರತಿಭೆಯ ಕುಟುಂಬದ ಮೇಲೆ ಗ್ರಾಮ ಪಂಚಾಯಿತಿಯೊಂದು ಸವಾರಿ ಮಾಡುತ್ತಿದೆ ಎಂದರೆ ನೀವು ನಂಬುತ್ತೀರಾ!? ಹೌದು ಹೀಗೊಂದು ದೌರ್ಜನ್ಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಬಬೆಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಅಂತಾರಾಷ್ಟ್ರೀಯ ಫವರ್ ಲಿಪ್ಟರ್ ವಿಶ್ವನಾಥ ಗಾಣಿಗ ಎಂಬುವರ ಕುಟುಂಬ ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳಿಕೆರೆ ಎಂಬಲ್ಲಿ ವಾಸವಿದೆ. ವಿಶ್ವನಾಥರ ತಂದೆ ಭಾಸ್ಕರ ಗಾಣಿಗ ಮತ್ತು ತಾಯಿ ಪದ್ಮಾವತಿ ಮನೆಯಲ್ಲಿದ್ದಾರೆ. ಇಬ್ಬರೂ ಹಿರಿಯ ನಾಗರೀಕರು! ಆದರೆ ಇದೇ ಕುಟುಂಬದ ಪಟ್ಟಾ ಸ್ಥಳದಲ್ಲಿರುವ ಸುಮಾರು 60 ಮರಗಳನ್ನು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತವೆ ಎಂಬ ಸುಳ್ಳುಕಾರಣ ನೀಡಿ ಗ್ರಾಮ ಪಂಚಾಯತ್ ಇಡೀ ಮರಗಳ ಬುಡವನ್ನೇ ಕಡಿದುಹಾಕಿದೆ. ಇದರಿಂದ ವರ್ಷಕ್ಕೆ ಸುಮಾರು ಒಂದೂವರೆ ಕ್ವಿಂಟಾಲ್ ಗೇರುಬೀಜ ಕೊಡುವ ಮರಗಳು ಸೇರಿದಂತೆ , ಹಲಸು, ಹೆಬ್ಬಲಸು ಮೊದಲಾದ ಅಮೂಲ್ಯ ಮರಗಳ ಮಾರಣಹೋಮ ನಡೆಸಲಾಗಿದೆ ಎಂದು ಭಾಸ್ಕರ ಗಾಣಿಗ ಆರೋಪಿಸಿದ್ದಾರೆ.
ಈ ಬಗ್ಗೆ ಹಿರಿಯ ನಾಗರೀಕರಾದ ಭಾಸ್ಕರ ಗಾಣಿಗರು ಕಂಡ್ಲೂರು ಪೊಲೀಸ್ ಠಾಣೆಗೆ, ಅರಣ್ಯ ಇಲಾಖೆಗೆ ಹಾಗೂ ಗ್ರಾಮ ಪಂಚಾಯತ್ ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯ ದೊರಕದೇ ಇದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಹಾಗೂ ಮುಖ್ಯಮಂತ್ರಿ ಯವರಿಗೆ ನೇರವಾಗಿ ದೂರು ನೀಡುವ ಎಚ್ಚರಿಕೆಯನ್ನು ವಿಶ್ವನಾಥ ಗಾಣಿಗ ನೀಡಿದ್ದಾರೆ.
ಒಟ್ಟಾರೆಯಾಗಿ, ಇಡೀ ದೇಶಕ್ಕೆ ವೇಟ್ ಲಿಪ್ಟಿಂಗ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ದೊರಕಿಸಿಕೊಟ್ಟ ವಿಶ್ವನಾಥ ಗಾಣಿಗರ ಹಿರಿಯ ನಾಗರೀಕರ ಕುಟುಂಬಕ್ಕೆ ಕಾಲಬುಡದ ಗ್ರಾಮ ಪಂಚಾಯತ್ ದೌರ್ಜನ್ಯ ನಡೆಸುತ್ತಿರುವುದು ವ್ಯಾಪಕ ಖಂಡನೆಗೆ ಕಾತಣವಾಗಿದೆ. ಕುಟುಂಬಕ್ಕಾದ ಅನ್ಯಾಯಕ್ಕೆ ನ್ಯಾಯ ದೊರಕಿಸುವ ಮತ್ತು ನಷ್ಟಕ್ಕೆಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕಿದೆ.