ಮಂಗಳೂರು, ಮೇ 21 (Daijiworld News/SM): ಮೇ 23ರಂದು ನಡೆಯುವ ಮತ ಎಣಿಕೆಯ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮತ ಎಣಿಕೆಯ ದಿನ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಪಿಎಫ್ ತುಕಡಿ ಸೇರಿ 5 ಕೆಎಸ್ ಆರ್ ಪಿ ತುಕಡಿ, 12 ಸಿಎಆರ್ ತುಕಡಿ, ಇಬ್ಬರು ಡಿಸಿಪಿ, 6 ಮಂದಿ ಎಸಿಪಿ, 17 ಮಂದಿ ಪಿಐ, 48 ಮಂದಿ ಪಿಎಸ್ಐ, 66 ಮಂದಿ ಎಎಸ್ಐ, 112 ಮಂದಿ ಹೆಚ್ಸಿ, 224 ಮಂದಿ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮತ ಎಣಿಕೆಯ ಕೇಂದ್ರ ಸುರತ್ಕಲ್ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಸಂಚಾರದಲ್ಲಿ ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. ಮುಂಜಾನೆ 7ರಿಂದ ಸಂಜೆಯ ತನಕ ರಸ್ತೆ ಸಂಚಾರ ಬದಲಾಣೆ ಮಾಡಲಾಗುತ್ತದೆ. ಜನರು ಇದಕ್ಕೆ ಸಹಕರಿಸಿ ಶಾಂತಿಯುತ ಮತ ಎಣಿಕೆಗೆ ಸಹಕಾರ ನೀಡಬೇಕೆಂದು ತಿಳಿಸಿದ್ದಾರೆ.
ಮಂಗಳೂರಿನಿಂದ ಉಡುಪಿಗೆ ಸಂಚರಿಸುವಂತಹ ಘನ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದ್ದು, ಕಾವೂರು ಜಂಕ್ಷನ್-ಬಜ್ಪೆ-ಕಟೀಲು-ಕಿನ್ನಿಗೋಳಿ ಮಾರ್ಗವಾಗಿ ಸಂಚರಿಸುವಂತೆ ಅವರು ತಿಳಿಸಿದ್ದಾರೆ. ಇದೇ ಮಾರ್ಗದಲ್ಲಿ ಉಡುಪಿ ಕಡೆಯಿಂದ ಮಂಗಳೂರಿಗೆ ಸಂಚರಿಸುವಂತೆ ಹೇಳಿದ್ದಾರೆ.
ಇನ್ನು ಮಂಗಳೂರು-ಉಡುಪಿ ಸಂಚಾರ ನಡೆಸುವ ಬಸ್ ಗಳು ಎನ್ ಐ ಟಿಕೆ ಬಳಿ ನಿಲ್ಲಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ಆದೇಶ ನೀಡಿದ್ದಾರೆ. ಉಡುಪಿಗೆ ಸಂಚರಿಸುವ ಲಘು ವಾಹನಗಳಿಗೆ ಎನ್ ಐಟಿಕೆ ಲೈಟ್ ಹೌಸ್- ರೆಡ್ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿ ಉಡುಪಿಗೆ ಸಂಚರಿಸುವಂತೆ ಅವರು ಸೂಚಿಸಿದ್ದಾರೆ.
ಇನ್ನು ಉಡುಪಿಯಿಂದ ಮಂಗಳೂರಿಗೆ ಬರುವಂತಹ ಲಘು ವಾಹನಗಳು ಚೇಳ್ಯಾರು ಕ್ರಾಸ್ ನಿಂದ ಎಡಕ್ಕೆ ಬಂದು ಮಧ್ಯ ವೃತ್ತದ ಮೂಲಕ ಮುಂಚೂರು ಕ್ರಾಸ್ ನಲ್ಲಿ ಹೆದ್ದಾರಿಯನ್ನು ಸೇರುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.