ಮಂಗಳೂರು, ಆ.05(DaijiworldNews/AA): ಸುರತ್ಕಲ್ ಮುಕ್ಕ ಭಾಗದಲ್ಲಿ ಹಳೆಯ ಟೋಲ್ಗೇಟ್ ಬಳಿಯ ಸರ್ವಿಸ್ ರಸ್ತೆಯಲ್ಲಿ ದುಷ್ಕರ್ಮಿಗಳು ಕುರಿಗಳ ಮೃತದೇಹಗಳನ್ನು ರಸ್ತೆ ಬದಿ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ.
ನಗರಪಾಲಿಕೆಯ ಕಾರ್ಮಿಕರ ಸಹಾಯದಿಂದ ಇವುಗಳನ್ನು ಬೇರೆಡೆ ಸ್ಥಳಾಂತರಿಸಿ ಮಣ್ಣು ಮಾಡುವ ಮೂಲಕ ಪರಿಸರ ಹಾಗೂ ಜನರ ಆರೋಗ್ಯ ಉಳಿಸುವ ಕೆಲಸ ಮಾಡಲಾಗಿದೆ.
ಈ ಹಿಂದೆ ವಧೆ ಮಾಡಿದ ಪ್ರಾಣಿಗಳ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿದ್ದರು. ಈಗ ಸತ್ತ ಪ್ರಾಣಿಗಳನ್ನೇ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿರುವ ಘಟನೆ ನಡೆದಿದೆ. ಮಳೆಗಾಲದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ರೋಗಗಳು ಹರಡಲು ಕಾರಣವಾಗುತ್ತಿದೆ.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇಂತಹ ಕೃತ್ಯ ಮಾಡುವ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ಕೊಡಿಸಬೇಕು ಎಂಬ ಆಗ್ರಹ ಸ್ಥಳೀಯರಿಂದ ಕೇಳಿಬಂದಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕ್ಷಿ ಸಮೇತ ದೂರು ಸ್ವೀಕರಿಸಲು ಸೂಕ್ತ ಡಿಜಿಟಲ್ ವ್ಯವಸ್ಥೆ ಮಾಡಬೇಕಿದೆ ಎಂಬ ಆಗ್ರಹ ಕೂಡ ಇದೆ.