ಮಂಗಳೂರು, ಆ.05(DaijiworldNews/AA): ಬೆಂಗಳೂರು - ಮಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಹಗಲ್ನ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ದುರಸ್ತಿ ಕಾರ್ಯವು ಅಂತಿಮ ಹಂತ ತಲುಪಿದೆ. ಘಟನಾ ಸ್ಥಳದಲ್ಲಿ ರೈಲು ಇಂಜಿನ್ ನ ಪ್ರಾಯೋಗಿಕ ಸಂಚಾರ ಯಶಸ್ವಿ ಕಂಡಿದೆ.
ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದಾಗಿನಿಂದ ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದೆ. ಜುಲೈ 3ರಂದು ಭೂಕುಸಿತದ ಸ್ಥಳದಲ್ಲಿ ತಡೆಗೋಡೆ ಗೋಡೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಹಳಿ ಮರುಸ್ಥಾಪನೆ ಕಾರ್ಯ ಬಹುತೇಕ ಕೊನೆಯ ಹಂತ ತಲುಪಿತ್ತು. ಇನ್ನು ಅಂತಿಮ ಹಂತದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಆದಷ್ಟು ಬೇಗನೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಸ್ಥಳದಲ್ಲಿ ಕೆಳಭಾಗದಿಂದಲೇ ಬಂಡೆಗಳನ್ನು ಜೋಡಿಸಿ, ಕಬ್ಬಿಣದ ನೆಟ್ ಬಳಸಿಕೊಂಡು ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದರ ಮೇಲೆ ಇನ್ನೊಂದು ಹಂತದಲ್ಲಿ ಬಂಡೆ ಜೋಡಿಸುವ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಬಹುತೇಕ ಅಂತಿಮಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ರೈಲು ಇಂಜಿನ್ ಸಂಚರಿಸಿ, ಯಶಸ್ವಿ ಕಂಡಿದೆ.