ಉಡುಪಿ, ಆ.04(DaijiworldNews/AA): ನಗರದ ಬ್ರಹ್ಮಗಿರಿಯಲ್ಲಿರುವ ಮೂರು ಅಪಾರ್ಟ್ಮೆಂಟ್ಗಳಿಗೆ ಜು. 31ರ ತಡರಾತ್ರಿ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ನಾಲ್ಕೈದು ಮಂದಿ ಮುಸುಕುಧಾರಿಗಳ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಘಟನೆಯ ಸಂಪೂರ್ಣ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ನಾಲ್ಕೈದು ವ್ಯಕ್ತಿಗಳು ಬಟ್ಟೆಯಿಂದ ತಮ್ಮ ಮುಖವನ್ನು ಮುಚ್ಚಿಕೊಂಡು ಫ್ಲ್ಯಾಟ್ನ ಒಳಗೆ ನುಗ್ಗಿದ್ದಾರೆ. ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ತೆರಳಿ ಕಳ್ಳತನ ಮಾಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳ ಪತ್ತೆಗಾಗಿ ಉಡುಪಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಸಿಸಿಟಿವಿ ಸಹಿತ ಇತರ ತಾಂತ್ರಿಕ ಪರಿಶೀಲನೆ ನಡೆಯುತ್ತಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.