ಮೂಡುಬಿದಿರೆ, ಆ.03(DaijiworldNews/AA): ಭಾರೀ ಮಳೆಗೆ ಗುಡ್ಡ ಕುಸಿದು ಪಾಲಡ್ಕ- ಕಲ್ಲಮುಂಡೂರು ಸಂಪರ್ಕ ರಸ್ತೆ ಬಂದ್ ಆಗಿರುವ ಘಟನೆ ಗುಂಡ್ಯಡ್ಕದಲ್ಲಿ ಇಂದು ನಸುಕಿನ ಜಾವ ನಡೆದಿದೆ.
ಇನ್ನು ವಿಷಯ ತಿಳಿದ ಪಾಲಡ್ಕ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಸಿಕ್ಖೇರಾ ಅವರು ಜೆಸಿಬಿ ತರಿಸಿ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸುವ ವೇಳೆಗೆ ಮತ್ತೆ ಪುನಃ ಗುಡ್ಡದಿಂದ ಮಣ್ಣು ಹಾಗೂ ಬಂಡೆಕಲ್ಲು ಜರಿದಿದೆ. ಬಂಡೆಕಲ್ಲು ಗುಡ್ಡದ ಅರ್ಧದಲ್ಲಿ ನಿಂತಿದ್ದರೆ ಮಣ್ಣು ಜೆಸಿಬಿ ಮೇಲೆ ಬಿದ್ದಿದೆ.
ಘಟನೆಯಲ್ಲಿ ಜೆಸಿಬಿ ಚಾಲಕ ಹಾಗೂ ಸಹಾಯಕ ಅಪಾಯದಿಂದ ಪಾರಾಗಿದ್ದಾರೆ. ನಂತರ ಇನ್ನೊಂದು ಜೆಸಿಬಿಯನ್ನು ತರಿಸಿ ಮಣ್ಣಿನಡಿ ಸ್ಪಲ್ಪ ಹೂತು ಹೋಗಿದ್ದ ಜೆಸಿಬಿಯನ್ನು ಮೇಲಕ್ಕೆ ತರಲಾಯಿತು.
ಗುಡ್ಡದಿಂದ ಮತ್ತೆ ಮಣ್ಣು ಜರಿಯುವ ಅಪಾಯವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಡ್ಕ- ಕಲ್ಲಮುಂಡೂರು ಸಂಪರ್ಕ ರಸ್ತೆಯನ್ನು ತಹಶಿಲ್ದಾರ್ ಪ್ರದೀಪ್ ಹುರ್ಡೇಕರ್ ಮುಂದಿನ ಆದೇಶದವರೆಗೆ ಬಂದ್ ಮಾಡಿಸಿದ್ದಾರೆ. ಇನ್ನು ಈ ರಸ್ತೆಯಲ್ಲಿ ವಾಹನ ಮಾತ್ರವಲ್ಲದೆ ಸಾರ್ವಜನಿಕರ ಓಡಾಟಕ್ಕು ನಿರ್ಬಂಧ ಹೇರಲಾಗಿದೆ. ಜೊತೆಗೆ ಈ ಭಾಗದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಸಿಲಾಗಿದೆ.