ಮಂಗಳೂರು, ಮೇ 21 (Daijiworld News/MSP): ಆಳ ಸಮುದ್ರದಲ್ಲಿ ಮೀನಿನ ಅಭಾವ ಹಾಗೂ ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಮೀನುಗಾರಿಕೆಯಲ್ಲಿ ಲಾಭ ಕಾಣದೆ ಆನೇಕ ಮೀನುಗಾರರು ತಮ್ಮ ಬೋಟ್ ಗಳನ್ನು ಅವಧಿಗೆ ಮುನ್ನವೇ ದಡದಲ್ಲಿ ಲಂಗರು ಹಾಕಿದ್ದಾರೆ.
ಮಳೆಗಾಲ ಆರಂಭವಾಗುವ ಮುಂಚಿತವಾಗಿಯೇ ಮಂಗಳೂರು ಬಂದರಿನ ಬಹುತೇಕ ಯಾಂತ್ರೀಕೃತ ಬೋಟುಗಳು ದಡ ಸೇರಿವೆ. ಅಡೆ ಕೊಡ್ಡೈ, ಪಾಂಪ್ಲೇಟ್ , ಬೂತಾಯಿ , ಅಂಜಲ್ ಮೀನುಗಾರಿಕೆ ವೇಳೆಯಲ್ಲಿ ಸಿಗುತ್ತಿಲ್ಲ.ಫಿಶ್ ಮಿಲ್ಗಳಿಗೆ ಹೋಗುವ ಕ್ಲಾತಿ ಮೀನು ಬಿಟ್ಟರೆ ಉಳಿದಂತೆ ಬೇರೆ ಮೀನುಗಳು ನಿರೀಕ್ಷಿತ ಮಟ್ಟದಲ್ಲಿ ಲಭಿಸಿಲ್ಲ. ಇದರಿಂದ ಮೀನು ಉದ್ಯಮ ಕುಸಿತ ಕಂಡಿದೆ.
ಪರ್ಸಿನ್ ಬೋಟ್ ಗಳು ಬೆಳಕು ಹಾಯಿಸಿ ನಡೆಸುವ ಮೀನುಗಾರಿಕೆಗೆ ಸರ್ಕಾರ ನಿಷೇಧ ಹೇರಿದ ಹಿನ್ನಲೆಯಲ್ಲಿ ಎಲ್ಲಾ ಬೋಟ್ ಗಳು ಕಳೆದ ತಿಂಗಳೇ ದಡ ಸೇರಿವೆ.
ಇನ್ನು ಮೀನುಗಾರಿಕಾ ರಜೆ ಪ್ರಾರಂಭವಾಗದಿದ್ದರೂ ಮೇ 31 ಈ ಬಾರಿ ಮೀನುಗಾರಿಕೆಗೆ ಕೊನೆಯ ದಿನವಾಗಿದೆ. ಜೂನ್ 1 ರಿಂದ ಮೀನುಗಾರಿಕಾ ರಜೆ ಆರಂಭವಾಗಲಿದೆ. ಜುಲೈ 31 ರವರೆಗೂ ಈ ರಜೆ ಇರಲಿದೆ. ಆದರೆ ಅದಕ್ಕೂ ಮುಂಚಿತವಾಗಿ ಮೀನುಗಾರಿಕಾ ಬೋಟ್ ಗಳು ದಡ ಸೇರಿವೆ. ಮೀನುಗಾರಿಕೆ ವೇಳೆ ರೂಪಾಯಿ ೬ ಲಕ್ಷಕ್ಕೂ ಅಧಿಕ ಮೌಲ್ಯದ ಮೀನು ದೊರೆತರೆ ಮಾತ್ರ ಲಾಭ. ಇಲ್ಲವಾದರೆ ಪ್ರತಿ ಪ್ರಯಾಣದಲ್ಲೂ ನಷ್ಟವೇ ಹೆಚ್ಚಾಗುತ್ತದೆ. ಹೀಗಾಗಿ ಮೀನುಗಾರಿಕಾ ದಕ್ಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡು ಮತ್ತು ಉತ್ತರ ಕರ್ನಾಟಕದ ಕೆಲಸಗಾರರಿಗೆ ರಜೆ ನೀಡಿ ಬೋಟ್ ಲಂಗರು ಹಾಕಲಾಗಿದೆ ಎನ್ನುತ್ತಾರೆ ಮೀನುಗಾರರು.