ಬದಿಯಡ್ಕ, ಮೇ 21 (Daijiworld News/MSP): ಅದು ವಿವಾಹದ ಸಂಭ್ರಮ , ನೂರಾರು ಜನರ ಸಮ್ಮುಖದಲ್ಲಿ ಮಂಗಳವಾದ್ಯ ಮೊಳಗುವುತ್ತಿತ್ತು. ಮಾಂಗಲ್ಯ ಧಾರಣೆಯ ಸುಸಂದರ್ಭ ಇನ್ನೇನು ವಧುವಿನ ಕುತ್ತಿಗೆಗೆ ವರ ತಾಳಿ ಕಟ್ಟಲು ಮುಂದಾಗಬೇಕು ಎನ್ನುವಷ್ಟರಲ್ಲಿ, ಮದುವೆ ಮಂಟಪಕ್ಕೆ ಸ್ನೇಹಿತರ ತಂಡದೊಂದಿಗೆ ತಲುಪಿದ ಯುವಕ ಮದುವೆಯನ್ನು ನಿಲ್ಲಿಸುವಂತೆ ಹೇಳಿದ.
ಮದುಮಗಳು ತನ್ನ ಪ್ರೇಯಸಿ, ಆದ್ದರಿಂದ ಆಕೆಗೆ ತಾಳಿ ಕಟ್ಟಲು ತನಗೆ ಅವಕಾಶ ಒದಗಿಸಬೇಕೆಂದು ಯುವಕ ಕೇಳಿಕೊಳ್ಳತೊಡಗಿದ. ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯದ ಜತೆಗೆ ಆತಂಕ. ಮದುವೆಗೆ ಆಹ್ವಾನಿಸಲ್ಪಟ್ಟ ಅತಿಥಿಗಳು ಮದುವೆ ಮಂಟಪಕ್ಕೆ ತಲುಪಿದ ಅಪರಿಚಿತ ಯುವಕನಿಗೆ ತಡೆ ಒಡ್ದಿದ್ದರು ..ಅಷ್ಟರಲ್ಲೇ ಗೊಂದಲ ಗಲಾಟೆ ಸೃಷ್ಟಿಯಾಯಿತು.
ಈ ವಿಚಾರ ಪೊಲೀಸರಿಗೂ ತಿಳಿಯಿತು. ವಿವಾಹದ ನಡೆಯುತ್ತಿದ್ದ ನೀರ್ಚಾಲು ವಿಷ್ಣುಮೂರ್ತಿ ಕಲ್ಯಾಣ ಮಂಟಪ ಆಗಮಿಸಿದ ಬದಿಯಡ್ಕ ಪೊಲೀಸರು ವರ, ವಧು ಹಾಗೂ ಆಕೆಯ ಪ್ರಿಯತಮ ಎನ್ನಲಾದ ಯುವಕನನ್ನು ಠಾಣೆಗೆ ಕರೆದೊಯ್ದರು. ಅಲ್ಲಿ ನಡೆದ ಸಂಧಾನ ಮಾತುಕತೆ ಸಂದರ್ಭ ವಧು ವರನ ಬದಲಿಗೆ ಪ್ರಿಯಕರನೊಂದಿಗೆ ತೆರಳುವುದಾಗಿ ತಿಳಿಸಿದಳು. ಸಂಬಂಧಿಕರು ಹಾಗೂ ಪೊಲೀಸರು ಆಕೆಯನ್ನು ಸಮಾಧಾನಿಸಿ, ನಿರ್ಧಾರ ಬದಲಿಸಲು ಯತ್ನಿಸಿದರೂ ಆಕೆ ತನ್ನ ಪಟ್ಟು ಸಡಿಲಿಸಲಿಲ್ಲ. ಸಂಜೆವರೆಗೆ ಈ ವಿದ್ಯಮಾನ ನಡೆದಿದ್ದು, ಕೊನೆಗೆ ವಧುವನ್ನು ಪ್ರಿಯಕರನೊಂದಿಗೆ ತೆರಳಲು ಒಪ್ಪಿದ್ದರಿಂದ ವಿವಾದ ಕೊನೆಗೊಂಡಿತು. ಸಂಬಂಧಿಕರು ತಮ್ಮ ಮನೆಗೆ ಮರಳಿದರು.
ನೆಲ್ಲಿಕಟ್ಟೆ ಅಜೆಕ್ಕೋಡು ನಿವಾಸಿ ವರನಿಗೆ ್ಕನ್ನೆಪ್ಪಾಡಿ ಬಳಿಯ ಚೋಯಿಮೂಲೆಯ ನಿವಾಸಿಯಾದ ಯುವತಿಯೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಭಾನುವಾರ ಮದುವೆ ನಡೆಯುತ್ತಿದ್ದಂತೆ ವಧುವಿನ ಪ್ರಿಯತಮ ಎನ್ನಲಾದ ಬಂದ್ಯೋಡು ಯುವಕ ಕಲ್ಯಾಣ ಮಂಟಪಕ್ಕೆ ಬಂದು ಮದುವೆಗೆ ತಡೆಯೊಡ್ಡಿ ಆಕೆಯನ್ನು ತನ್ನವಳನ್ನಾಗಿಸಿಕೊಂಡಿದ್ದಾನೆ. ಘಟನೆ ವಿರುದ್ದ ಠಾಣೆಯಲ್ಲಿ ಯಾರ ವಿರುದ್ದವೂ ಪ್ರಕರಣ ದಾಖಲಾಗಿಲ್ಲ.