ಬಂಟ್ವಾಳ, ಮೇ.20(Daijiworld News/SS): ಹಿಂದೂ ಯುವಕನೋರ್ವ ತನ್ನ ಮದುವೆಯ ಅಂಗವಾಗಿ, ಮುಸ್ಲಿಂ ಗೆಳೆಯರಿಗಾಗಿ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಸಂಬಾರ ತೋಟ ಎಂಬಲ್ಲಿನ ನಿವಾಸಿ ಶೈಲೇಶ್ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಹಿಂದೂ ಮುಸ್ಲಿಮರ ನಡುವೆ ಸೌಹಾರ್ದತೆಗೆ ಸಾಕ್ಷಿಯಾದವರು.
ಶೈಲೇಶ್ ತನ್ನ ಮದುವೆಯ ಅಂಗವಾಗಿ ನೂರಾನಿಯ ಜುಮಾ ಮಸೀದಿಯ ಸಂಬಾರ ತೋಟದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಈ ಸೌಹಾರ್ದತೆಯ ಇಫ್ತಾರ್ ಕೂಟದಲ್ಲಿ ನೂರಾನಿಯ ಜುಮಾ ಮಸೀದಿ ವ್ಯಾಪ್ತಿಯ ಸುಮಾರು 100ಕ್ಕೂ ಹೆಚ್ಚು ಮಂದಿ ಮುಸ್ಲಿಂ ಸಹೋದರರು ಭಾಗವಹಿಸಿ, ಉಪವಾಸ ತೊರೆದರು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಶೈಲೇಶ್ ಅವರ ವಿವಾಹ ಕಾರ್ಯಕ್ರಮಕ್ಕೆ ಊರಿನ ಮುಸ್ಲಿಮಂ ಸಮುದಾಯದವರು ಹೋಗಿ ಕೇವಲ ಶುಭ ಹಾರೈಸಿದ್ದರು. ಆದರೆ ರಂಝಾನ್ ಉಪವಾಸದ ಕಾರಣ ಮದುವೆಯ ಔತಣಕೂಟದಲ್ಲಿ ಅವರು ಭಾಗವಹಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಶೈಲೇಶ್ ಗ್ರಾಮದ ಮಸೀದಿಯಲ್ಲಿ ಮುಸ್ಲಿಮ್ ಸಮುದಾಯದವರಿಗಾಗಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದಾರೆ. ಈ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.