ಉಡುಪಿ, ಮೇ20(Daijiworld News/SS): ಕೃಷ್ಣ ಮಠವನ್ನು ಕೋಮುವಾದಿಗಳ ಕೇಂದ್ರ ಅಂತಾ ಹೇಗೆ ಹೇಳುತ್ತೀರಿ...? ಎಂದು ಕೋಟ ಶ್ರೀನಿವಾಸ ಪೂಜಾರಿ ದಿನೇಶ್ ಅಮೀನ್ ಮಟ್ಟು ಅವರನ್ನು ಗರಂ ಆಗಿ ಪ್ರಶ್ನಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿಯವರು ಮಾಜಿ ಸಿಎಂ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರಾಗಿದ್ದ ದಿನೇಶ್ ಅಮೀನ್ ಮಟ್ಟು ವಿರುದ್ಧ ಕಿಡಿಕಾರಿದ್ದಾರೆ. ಮಾತ್ರವಲ್ಲ ಕೃಷ್ಣಮಠ, ಪೇಜಾವರ ಶ್ರೀಗಳ ಬಗ್ಗೆ ಮಟ್ಟು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ದಿನೇಶ್ ಅಮೀನ್ ಮಟ್ಟು ಅವರು, ಕೃಷ್ಣಮಠ ಕೋಮುವಾದದ ಕೇಂದ್ರ. ಪೇಜಾವರ ಸ್ವಾಮೀಜಿ ಅದರ ಮುಖಂಡ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ದಿನೇಶ್ ಅಮೀನ್ ಮಟ್ಟು ಹೇಳಿಕೆ ಅತ್ಯಂತ ನೋವಿನ ಸಂಗತಿ. ಪೇಜಾವರ ಸ್ವಾಮೀಜಿ ವಯೋವೃದ್ಧರು, ಜ್ಞಾನ ವಂತರು. ಪೇಜಾವರ ಶ್ರೀಗಳು ಇಫ್ತಾರ್ ಕೂಟ ಮಾಡಿದ್ದರು. ಆಗ ನಿಮ್ಮಂತೆ ಯೋಚಿಸುವವರು ಸ್ವಾಗತಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಮಠವನ್ನು ಕೋಮುವಾದಿಗಳ ಕೇಂದ್ರ ಎಂದು ಹೇಗೆ ಹೇಳುತ್ತೀರಿ...? ಕೃಷ್ಣಮಠ ಹಿಂದೂ ಧರ್ಮದ ಸರ್ವಶ್ರೇಷ್ಟ ದೇವಾಲಯ. ಪೇಜಾವರ ಶ್ರೀ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ. ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಅಂತಾ ಹೇಳಿದರೆ ಪೇಜಾವರ ಶ್ರೀ ಕೋಮುವಾದಿ ಹೇಗಾಗ್ತಾರೆ..? ಎಂದು ಪ್ರಶ್ನಿಸಿದ್ದಾರೆ.