ಕಾರ್ಕಳ,ಮೇ 20 (Daijiworld News/MSP): ಏರುತ್ತಿರುವ ಬಿಸಿಲಿನ ಝಳಕ್ಕೆ ಐತಿಹಾಸಿಕ ರಾಮಸಮುದ್ರ ಜಲ ಮಟ್ಟ ತಳಸೇರಿದ್ದು, ಇದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡ ಶಾಸಕ ಹಾಗೂ ವಿಧಾನ ಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಹಾಗೂ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ವಿವಿಧ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮುಂಡ್ಲಿ ಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಕಿಂಡಿಅಣೆಕಟ್ಟಿನಲ್ಲಿ ಇದೀಗ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ಪುರಸಭಾ ವ್ಯಾಪ್ತಿಗೆ ರಾಮಸಮುದ್ರ ಕುಡಿಯುವ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ರಾಮಸಮುದ್ರದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ತೆರೆಯುತ್ತಿರುವುದರಿಂದ ಮೇ 25ರ ತನಕ ಪುರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವಷ್ಟೇ ಅಲ್ಲಿ ನೀರು ಇರುವುದು ದೃಢ ಪಟ್ಟಿದೆ. ಆ ನಂತರದ ದಿನಗಳಲ್ಲಿ ಕುಡಿಯುವ ನೀಡು ಸರಬರಾಜು ಮಾಡುವ ಪರ್ಯಾಯ ವ್ಯವಸ್ಥೆ ಇನ್ನೂ ಗಗನ ಕುಸುಮವಾಗಿಯೇ ಉಳಿದಿದೆ.
ಮೇ 19ರ ಮಳೆಯಿಂದ ಸ್ವರ್ಣ ನದಿಯಲ್ಲಿ ನೀರನ ಮಟ್ಟ ಹೆಚ್ಚಳ
ಮೇ 19ರ ರಾತ್ರಿ ಮಾಳ ಪರಿಸರದಲ್ಲಿ ಸುರಿದ ಮಳೆಗೆ ಸ್ವರ್ಣ ನದಿಯ ನೀರಿನ ಮಟ್ಟ ಒಂದಿಷ್ಟು ಹೆಚ್ಚಳಗೊಂಡಿದ್ದು, ಇದೇ ರೀತಿ ಮಳೆ ಸುರಿದರೆ ಸ್ವರ್ಣ ನದಿಯಿಂದಲೇ ಕುಡಿಯುವ ನೀರು ಸರಬರಾಜು ಮಾಡುವ ಸಾಧ್ಯತೆಗಳು ಇವೆ.
ಉಡುಪಿಯವರಿಗೂ ಅಸರೆ
ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ,ಕಲ್ಯಾಣಿ,ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.
ಈ ನಡುವೆ ತೆಳ್ಳಾರಿನ ಮುಂಡ್ಲಿ ಯಲ್ಲಿ ಕಿರುಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟು ನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಸಮಗ್ರವಾಗಿ ಪೊರೈಕೆ ಮಾಡಲಾಗುತ್ತಿದೆ.
ಗಂಭೀರ ವಿಚಾರವೆಂದು ಪರಿಗಣಿಸಲೇ ಬೇಕು
ರಾಮಸಮುದ್ರದ ಪರಿಸರದಲ್ಲಿ ನಕ್ಸಲ್ ನಿಗ್ರಹ ದಳದ ಶಿಬಿರವು ಇದೆ. ಇಲ್ಲಿನ ಸಿಬ್ಬಂದಿಗಳು ದೇಹಬಾಧೆಯನ್ನು ತೀರಿಸಿಕೊಳ್ಳಲು ಪರಿಸರದಲ್ಲಿಯೇ ಶೌಚಾಲಯ ಇವೆ. ಸಿಬ್ಬಂದಿಗಳ ಸಾಮಾಥ್ಯಕ್ಕೆ ಅನುಗುಣವಾಗಿ ಶೌಚಾಲಯ ನಿರ್ಮಾಣವಾಗದೇ ಹೋದುದರಿಂದ ಮಳೆಗಾಲದ ಸಂದರ್ಭದಲ್ಲಿ ಸಮಸ್ಸೆ ಎದುರಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಶೌಚಾಲಯದಲ್ಲಿ ತುಂಬಿ ತುಳುಕುವ ಮಲಮಿಶ್ರಿತ ನೀರು ನೇರವಾಗಿ ರಾಮಸಮುದ್ರದಲ್ಲಿ ಲೀನವಾಗುತ್ತಿದೆ. ಹಲವು ವರ್ಷಗಳ ಹಿಂದೆಯೇ ಈ ವಿಚಾರವು ಪುರಸಭಾ ಆಡಳಿತದ ಗಮನಕ್ಕೂ ಬಂದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಹೋದುದರಿಂದ ಸಮಸ್ಸೆ ಯಥಾಸ್ಥಿತಿಯಲ್ಲಿದ್ದು, ಅದಕ್ಕೆ ಪೂರ್ಣ ವಿರಾಮ ಹಾಕುವ ಜವಾಬ್ದಾರಿ ಪುರಸಭೆಗಿದೆ.
ಮಿತವಾಗಿ ನೀರನ್ನು ಬಳಸುವಂತೆ ಶಾಸಕ ಮನವಿ
ಬಿಸಿಲಿನ ತಾಪ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಐತಿಹಾಸಿಕ ರಾಮಸಮುದ್ರ ಕೆರೆಯಲ್ಲೂ ನೀರಿನ ಮಟ್ಟ ತಳ ಹಿಡಿದಿದೆ. ಈ ನಿಟ್ಟಿನಲ್ಲಿ ಪುರಸಭಾ ವ್ಯಾಪ್ತಿಗೆ ಎರಡು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡುವ ಚಿಂತನೆಯನ್ನು ಪುರಸಭಾ ಆಡಳಿತ ವರ್ಗ ನಡೆಸಬೇಕಾಗಿದೆ. ಪ್ರತಿಯೊಬ್ಬ ನಾಗರಿಕನು ಬದುಕಿಗೆ ಅಗತ್ಯವಾದ ನೀರನ್ನು ಮಿತವಾಗಿ ಬಳಸುವಂತೆ ಇದೇ ಸಂದರ್ಭದಲ್ಲಿ ಶಾಸಕ ಹಾಗೂ ವಿಧಾನ ಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಪರಿಸರ ಅಭಿಯಂತರ ಮದನ್, ಇಂಜಿನಿಯರ್ ಪದ್ಮನಾಭ, ಗ್ರಾಮಕರಣಿಕ ಶಿವಪ್ರಸಾದ್, ಕೌನ್ಸಿಲರ್ ಯೋಗೀಶ್ ದೇವಾಡಿಗ, ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.