ಮಂಗಳೂರು, ಮೇ20(Daijiworld News/SS): ಜಿಲ್ಲೆಯಲ್ಲಿ ಉಂಟಾಗಿರುವ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಪಿಯು ತರಗತಿಯ ಆರಂಭವನ್ನು ನಗರದ ಬಹುತೇಕ ಖಾಸಗಿ ಕಾಲೇಜುಗಳು ಮುಂದೂಡಿವೆ.
ಮೇ 20ರಂದು ಆರಂಭವಾಗಬೇಕಿದ್ದ ಪಿಯು ತರಗತಿಯನ್ನು ನಗರದ ಬಹುತೇಕ ಖಾಸಗಿ ಕಾಲೇಜುಗಳು ಮುಂದೂಡಿರುವ ಮಾಹಿತಿ ಲಭ್ಯವಾಗಿದೆ. ಜಲಕ್ಷಾಮದ ಹಿನ್ನೆಲೆಯಲ್ಲಿ ಮೇ 20ಕ್ಕೆ ಆರಂಭವಾಗಬೇಕಿದ್ದ ಪಿಯುಸಿ ತರಗತಿಯನ್ನು ಮುಂದೂಡುವಂತೆ ರಾಜ್ಯ ಪಿಯು ಮಂಡಳಿಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರಿನ್ಸಿಪಾಲರ ಅಸೋಸಿಯೇಶನ್ ಮನವಿ ಮಾಡಿದೆ.
ಮಂಗಳೂರಿನ ಪ್ರಮುಖ ಕಾಲೇಜುಗಳಾದ ಸೈಂಟ್ ಅಲೋಶಿಯಸ್, ಶಾರದಾ ವಿದ್ಯಾಲಯ ಸೇರಿದಂತೆ ಪ್ರಮುಖ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸೋಮವಾರ ಆರಂಭವಾಗಬೇಕಾಗಿದ್ದ ತರಗತಿಯನ್ನು ತಾತ್ಕಾಲಿಕವಾಗಿ ಮುಂದೂಡಿವೆ.
ರಾಜ್ಯ ಪಿಯು ಮಂಡಳಿ ಆದೇಶ ಪ್ರಕಾರ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಮೇ 20ರಿಂದ ಆರಂಭಗೊಳ್ಳಬೇಕಾಗಿದೆ. ಆದರೆ ನೀರಿನ ಸಮಸ್ಯೆಯ ಕಾರಣ ನಗರದ ಕೊಡಿಯಾಲ್ಬೈಲ್ನಲ್ಲಿರುವ ಶಾರದಾ ವಿದ್ಯಾಲಯ ತನ್ನ ಪಿಯು ತರಗತಿಗಳ ಆರಂಭವನ್ನು ಒಂದು ವಾರ ಕಾಲ ಮುಂದೂಡಲು ನಿರ್ಧರಿಸಿದೆ. ಸೈಂಟ್ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಜೂನ್ 1ರ ಬಳಿಕ ಕಾಲೇಜು ಆರಂಭಿಸಲು ನಿರ್ಧರಿಸಿದೆ.
ಮಾತ್ರವಲ್ಲ, ಈ ಕುರಿತು ಜಿಲ್ಲಾ ಪಿಯು ಕಾಲೇಜು ಪ್ರಿನ್ಸಿಪಾಲರ ಸಂಘ ಕೂಡ ತರಗತಿಯನ್ನು ಮುಂದೂಡುವಂತೆ ರಾಜ್ಯ ಪಿಯುಸಿ ಮಂಡಳಿಗೆ ಈಗಾಗಲೇ ಮನವಿ ಸಲ್ಲಿಸಿದೆ. ಆದರೆ ಮಂಡಳಿಯಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ.