ಉಡುಪಿ, ಮೇ 20 (Daijiworld News/MSP): ಚುನಾವಣೋತ್ತರ ಸಮೀಕ್ಷೆಯಿಂದ ರಾಷ್ಟ್ರಾದ್ಯಂತ ಸಂಚಲನ ಮೂಡಿದ್ದು ಎನ್ ಡಿ ಎ 350 ಕ್ಕೂ ಅಧಿಕ ಸ್ಥಾನ ಪಡೆಯುವ ನಮ್ಮ ನಿರೀಕ್ಷೆ ನಿಜವಾಗಿದೆ. ಹೀಗಾಗಿ ದೇಶದಲ್ಲಿ ಮಹಾ ಘಟ್ ಬಂಧನ ನುಚ್ಚುನೂರಾಗಲಿದೆ. ಇನ್ನು ಕರ್ನಾಟಕದಲ್ಲಿ 22 ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಮೇ 20 ರ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ, "ಈಗಾಗಲೇ ಮೈತ್ರಿ ಕೂಟದಲ್ಲಿ ಬಿರುಕು ಉಂಟಾಗಿದೆ. ಚುನಾವಣೆಯ ಸಂದರ್ಭದಲ್ಲಿಯೇ ಮೈತ್ರಿ ಸರ್ಕಾರ ಒಡೆದ ಮನೆಯಂತಾಗಿದ್ದು ಚುನಾವಣೆಯ ಫಲಿತಾಂಶದ ಬಳಿಕ ಆಂತರಿಕ ಭಿನ್ನಾಭಿಪ್ರಾಯ ಪರಾಕಾಷ್ಟೆಗೆ ತಲುಪಿ ಮೈತ್ರಿ ಅದಾಗಿಯೇ ಪತನವಾಗುತ್ತದೆ" ಎಂದು ಭವಿಷ್ಯ ನುಡಿದರು.
ವಿಧಾನಸಭೆ ವಿಸರ್ಜನೆ ಮಾಡೋದೇ ಸರಿ ಎಂದ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಶ್ರೀನಿವಾಸ ಪೂಜಾರಿ, "ಹೊರಟ್ಟಿ ಅವರು ರಾಜಕೀಯದಲ್ಲಿ ಹಿರಿಯರು ಹೀಗಾಗಿ ಅವರಿಗೆ ಮೈತ್ರಿ ಕೂಟ ಇನ್ನು ಹೆಚ್ಚೆ ದಿನ ಬದುಕಲ್ಲ ಅನ್ನೋದು ಅವರಿಗೆ ಅರ್ಥವಾಗಿದೆ ಮತ್ತು ಅವರ ಬಾಯಿಯಿಂದಲೂ ಜನರ ಅಭಿಪ್ರಾಯವೇ ಬಂದಿದೆ " ಎಂದರು.
ಇನ್ನು ಮಾದ್ಯಮಗಳಿಗೆ ಕಡಿವಾಣ ಹಾಕೋದಾಗಿ ಸಿಎಂ ಹೇಳಿಕೆ ಪ್ರತಿಕ್ರಿಯಿಸಿದ ಅವರು , ತುರ್ತು ಪರಿಸ್ಥಿತಿ ಕಾಲದಲ್ಲೇ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹಾ ಚಿಲ್ಲರೆ ಆಟಗಳು ನಡೆಯಲ್ಲ ಎನ್ನುವುದು ಮುಖ್ಯಮಂತ್ರಿಗಳಿಗೆ ತಿಳಿದಿರಬೇಕು ಎಂದು ಹೇಳಿದರು.