ಮಂಗಳೂರು, ಮೇ 20 (Daijiworld News/MSP): ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಕಳೆದ 7 ದಶಕಗಳಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ನಾಥೂರಾಂ ಗೋಡ್ಸೆ ಅಥವಾ ಗಾಂಧಿ ಹಂತಕ ಗೋಡ್ಸೆ ಮತ್ತೆ ಮುನ್ನಲೆಗೆ ಬಂದಿದ್ದು 2019ರ ಲೋಕಸಭಾ ಚುನಾವಣೆಯಿಂದ. ನಟ ಕಮಲ್ ಹಾಸನ್ ಸ್ವಾತಂತ್ರ ಭಾರತದ ಮೊದಲ ಹಿಂದೂ ಉಗ್ರ ಗೋಡ್ಸೆ ಎಂಬ ಹೇಳಿಕೆ ರಾಜಕೀಯ ಬಣ್ಣ ಪಡೆದು ಹಲವು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.
ಈ ನಡುವೆ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ನಳಿನ್ಕುಮಾರ್ ಕಟೀಲು ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ಕ್ಷಮೆಯಾಚನೆ ಮಾಡಿದ್ದರು. ಗೋಡ್ಸೆ ಪರ ಹೇಳಿಕೆ ನೀಡಿದ್ದ ಸಾಧ್ವಿ ಪ್ರಗ್ಯಾ ಸಿಂಗ್ , ಅನಂತ್ ಕುಮಾರ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ವಿರುದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗರಂ ಆಗಿ ವರದಿ ಕೇಳಿದ್ದರು.
ಈ ಬೆಳವಣಿಗೆಗಳ ನಡುವೆ ಮಂಗಳೂರಿನಲ್ಲಿ ಭಾನುವಾರ ಗೋಡ್ಸೆಯ ಜನ್ಮದಿನಾಚರಣೆಯನ್ನು ಮಾಡುವ ಮೂಲಕ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯದ ಕಾರ್ಯಕರ್ತರು ವಿವಾದಕ್ಕೆ ಕಾರಣರಾಗಿದ್ದಾರೆ.
ಅಹಿಂಸಾವಾದಿ, ರಾಷ್ಟ್ರಪಿತ ಎಂದು ಇಡೀ ದೇಶದ ಜನತೆ ಗೌರವಿಸುವ ಮಹಾತ್ಮಾಗಾಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಇದೀಗ ಕೆಲವು ಹಿಂದೂ ಸಂಘಟನೆಗಳು ವೈಭವೀಕರಿಸುತ್ತಿದ್ದು, ಆತನ ಜನ್ಮ ದಿನವನ್ನೂ ಆಚರಿಸುತ್ತಿದ್ದಾರೆ. ಮಂಗಳೂರಿನಲ್ಲೂ ನಾಥೂರಾಮ್ ಗೋಡ್ಸೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆತನನ್ನು ಮಹಾನ್ ದೇಶಭಕ್ತ ಎಂದು ಬಿಂಬಿಸಲಾಗಿದೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಹಾಸಭಾದ ಕರ್ನಾಟಕ ರಾಜ್ಯ ಅಧ್ಯಕ್ಷ ಎಲ್ ಕೆ ಸುವರ್ಣ,ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮೊದಲಾದವರಿದ್ದರು. ಮಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಯಕ್ರಮ ಆಯೋಜಿಸಿದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಗ್ರಹ ವ್ಯಕ್ತವಾಗಿದೆ.