ಹಳೆಯಂಗಡಿ, ಮೇ 20 (Daijiworld News/MSP): ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯಲ್ಲಿ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಪಾವಂಜೆ ನಿವಾಸಿ ಪ್ರಗತಿಪರ ಕೃಷಿಕ ರುಕ್ಕಯ್ಯ ಮೂಲ್ಯ (96) ಸಾವನ್ನಪ್ಪಿದ ಘಟನೆ ಮೇ 19ರಂದು ನಡೆದಿದೆ.
ದಣಿವರಿಯದ ತುಳುನಾಡಿನ ಮಣ್ಣಿನ ಮಗ ಎಂದೇ ಖ್ಯಾತರಾದ ರುಕ್ಕಯ್ಯ ಮೂಲ್ಯ ಕೃಷಿಯನ್ನೇ ತನ್ನ ಬದುಕು ಎಂದು ಹತ್ತನೇ ವಯಸ್ಸಿನಲ್ಲಿಯೇ ನೇಗಿಲು ಹಿಡಿದವರು. ತನ್ನ ಬೆನ್ನು ಬಾಗಿದರೂ 85 ವರ್ಷಗಳಿಂದ ಅವರ ಕೃಷಿಯಲ್ಲಿನ ಆಸಕ್ತಿ ಮಾತ್ರ ಕಮ್ಮಿಯಾಗಿರಲಿಲ್ಲ.
ತನ್ನ ಮನೆಯ ಮುಂಭಾಗದಲ್ಲಿ ರಸ್ತೆಯನ್ನು ದಾಟುತ್ತಿದ್ದಾಗ ಅತಿ ವೇಗದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಕಾರು ಏಕಾಏಕಿ ಢಿಕ್ಕಿ ಹೊಡೆಯಿತು. ರಸ್ತೆಗೆ ಬಿದ್ದ ರುಕ್ಕಯ್ಯ ಅವರನ್ನು ತತ್ಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ತಲೆಗೆ ಮತ್ತು ಕೈಗೆ ಗಂಭೀರ ಗಾಯವಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಸಹ ತೀವ್ರ ಹೃದಯಾಘಾತಕ್ಕೊಳಗಾದರು ಎಂದು ವೈದ್ಯರು ತಿಳಿಸಿದ್ದಾರೆ. ಮಂಗಳೂರು ಉತ್ತರ ವಲಯದ ಸಂಚಾರಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಾವಂಜೆ ಬಳಿಯ ರುಕ್ಕಯ್ಯ ಮೂಲ್ಯ ಕೃಷಿ ಬದುಕಿನ ಚಿತ್ರಣವಾಗಿದ್ದರು ದಿನನಿತ್ಯವೂ ಅವರು ಹೆದ್ದಾರಿ ಬಳಿಯ ಕೃಷಿ ಗದ್ದೆಗೆ ನಡೆದುಕೊಂಡು ಹೋಗುತ್ತಿದ್ದರು. ಸುಮಾರು ೧೫ ಎಕರೆ ಕೃಷಿ ಭೂಮಿಯಲ್ಲಿ ಎನೆಲ್ , ಸುಗ್ಗಿ, ಕೊಳಕೆ, ಇಡೆ ಕೊಳಕೆ ಕೃಷಿ ಮಾಡಿ ತಾಲೂಕಿನಲ್ಲಿಯೇ ಹೆಚ್ಚು ಇಳುವರಿ ತೆಗೆದ ಕೀರ್ತಿ ರುಕ್ಕಯ್ಯ ಮೂಲ್ಯ ಅವರದಾಗಿತ್ತು ಜನಾನುರಾಗಿಯಾಗಿದ್ದ ಅವರನ್ನು ಅನೇಕ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ವಿಶೇಷವಾಗಿ ಸಮ್ಮಾನಿಸಿ ಗೌರವಿಸಿತ್ತು. ಇಳಿವಯಸ್ಸಿನಲ್ಲಿಯೂ ಕೃಷಿಕಾರ್ಯದಶಿಸ್ತಿನ ಸಿಪಾಯಿಯಂತಿದ್ದರು. ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಮೂವರುಪುತ್ರಿಯರನ್ನು ಅಗಲಿದ್ದಾರೆ