ಬೆಂಗಳೂರು: ಹುಟ್ಟಿದಾತ ಸಾಯಲೇಬೇಕು. ಆದರೆ ಸಾವು ಯಾವ ರೂಪದಲ್ಲಿ ಬಂದು ನಮ್ಮ ಮೇಲೆರಗುತ್ತದೆ ಎಂದುಬುದು ಮಾತ್ರ ಯಾರಿಗೂ ತಿಳಿದಿಲ್ಲ. ಅದು ತಿಳಿದರೆ ಬಹುಶಃ ಸಾವನ್ನೂ ಮಾನವ ವಂಚಿಸಬಹುದೇನೋ!
ಬೆಂಗಳೂರಿನ ಒಂದೇ ಕುಟುಂಬದ ಮೂವರು ಸದಸ್ಯರನ್ನು ಸಾವು ಮರದ ರೂಪದಲ್ಲಿ ಕಾಯುತ್ತಿತ್ತು. ಸದ್ಯ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳ ಮೇಲೆಲ್ಲಾ ನೀರುನಿಂತು ವಾಹನ ಸಂಚಾರ ಅಸಾಧ್ಯವಾದರೆ ಗಾಳಿಯ ಅಬ್ಬರಕ್ಕೆ ಒಂದರ ಹಿಂದೊಂದರಂತೆ ಧರೆಗುರುಳುತ್ತಿರುವ ಮರಗಳು ಪ್ರಾಣಕ್ಕೆ ಸಂಚಕಾರ ತೊಂದೊಡ್ಡಿವೆ.
ಈ ಮಧ್ಯೆ ಬಿರುಮಳೆಯಿಂದಾಗಿ ರಸ್ತೆಯ ಪಕ್ಕ ತಮ್ಮ ಕಾರನ್ನು ನಿಲ್ಲಿಸಿ ಅದರೊಳಗೆ ಕುಳಿತುಕೊಂಡಿದ್ದ ಮೂವರ ಮೇಲೆ ಮರ ಬಿದ್ದ ಪರಿಣಾಮ ಅವರು ಕಾರಿನೊಳಗೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸುಮ್ಮನಹಳ್ಳಿ ನಿವಾಸಿಗಳಾದ ರಮೇಶ್ (42), ಅವರ ಪತ್ನಿ ಭಾರತಿ (38) ಮತ್ತು ಭಾರತಿಯ ಸಹೋದರ ಜಗದೀಶ್ (46) ಈ ರೀತಿ ವಿಧಿಲೀಲೆಗೆ ಬಲಿಯಾದವರು.
ಶುಕ್ರವಾರದಂದು ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ತಮ್ಮ ಎಸ್ಟೀಮ್ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರೊಳಗೆ ಕುಳಿತಿದ್ದ ಈ ಮೂವರ ಮೇಲೆ ನೀಲಗಿರಿ ಮರ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಇವರು ಕಾರ್ ನಿಲ್ಲಿಸಿದ ಸ್ಥಳದಲ್ಲಿ ಹಲವು ಮರಗಳಿದ್ದು ಅದನ್ನು ಕಂಡ ವ್ಯಕ್ತಿಯೊಬ್ಬರು ಇವರ ಬಳಿ ಬಂದು ಕಾರನ್ನು ಸುರಕ್ಷಿತ ಪ್ರದೇಶದಲ್ಲಿ ನಿಲ್ಲಿಸುವಂತೆ ಸಲಹೆ ನೀಡಿದ್ದರು. ಅದರಂತೆ ಕಾರ್ ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಲು ಪ್ರಯತ್ನಿಸಿದರೂ ಕಾರ್ ಸ್ಟಾರ್ಟ್ ಆಗದ ಕಾರಣ ಕಾರನ್ನು ಅಲ್ಲೇ ನಿಲ್ಲಿಸಿದ್ದರು.
ಇದಾದ ಅರೆಕ್ಷಣದಲ್ಲೇ ಕಾರ್ ಸಮೀಪವಿದ್ದ ನೀಲಗಿರಿಯ ಮರ ಅವರಿದ್ದ ಕಾರಿನ ಮೇಲೆ ಬಿದ್ದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಅಲ್ಲಿ ನೆರೆದಿದ್ದ ಜನರ ಪ್ರಕಾರ ಕಾರಿನಲ್ಲಿ ಐದು ಮಂದಿ ಇದ್ದು ಇಬ್ಬರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.