ಮಂಗಳೂರು, ಮೇ19(Daijiworld News/SS): ನಗರದಲ್ಲಿ ನೀರಿನ ಅಭಾವವಿದ್ದರೂ ಜನರ ಸಹಕಾರದಿಂದ ರೇಶನಿಂಗ್ ವ್ಯವಸ್ಥೆ ಒಂದು ಹಂತದಲ್ಲಿ ನಡೆಯುತ್ತಿದೆ. ಇದು ಜೂನ್ 6 ರವರೆಗೆ ಸಾಗಲಿದೆ ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ಯಾಂಕರ್ ಮೂಲಕ ಮನಪಾ ನಗರಗಳಿಗೆ ನೀರು ಸರಬರಾಜು ಮಾಡುತ್ತಿದೆ. ಈಗಾಗಲೇ ನಗರದಲ್ಲಿನ 14 ತೆರೆದ ಬಾವಿಗಳನ್ನು ದುರಸ್ತಿ ಮಾಡಿದೆ. ಮಾತ್ರವಲ್ಲ 16 ಕೊಳವೆ ಬಾವಿಗೆ ಯೋಜನೆ ಹಾಕಲಾಗಿದೆ. ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೊಳವೆ ಬಾವಿ ತೆರೆಯಲು ಮನವಿ ಮಾಡಲಾಗಿದೆ ಎಂದು ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ನಾಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುತ್ತದೆ. ಈ ವೇಳೆ ಅತಿವೃಷ್ಟಿ, ಅನಾವೃಷ್ಟಿ, ಕಡಲುಕೊರೆತದ ಬಗ್ಗೆ ವಿಚಾರ ಮಾಡಲಾಗುವುದು ಎಂದು ಹೇಳಿದರು.
ನಗರಕ್ಕೆ ದಿನಾ ನೀರು ಕೊಟ್ಟರೆ ಈ ತಿಂಗಳ ಅಂತ್ಯದವರೆಗೆ ಮಾತ್ರ ನೀರು ಕೊಡಬಹುದು. ಹೀಗಾಗಿ ಬಹಳ ಜಾಗರೂಕತೆಯಿಂದ ನೀರಿನ ಪೂರೈಕೆ ಮಾಡಲಾಗುತ್ತಿದೆ. ಧರ್ಮಸ್ಥಳದಲ್ಲಿ ನೀರಿನ ಅಭಾವವಿರುವ ಬಗ್ಗೆ ನಾನು ಚರ್ಚೆ ನಡೆಸುತ್ತೇನೆ. ಕ್ಷೇತ್ರಕ್ಕೆ ಜಿಲ್ಲಾಡಳಿತ ಮತ್ತು ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತದೆ. ನಗರ ಅಭಿವೃದ್ಧಿಯಾಗುತ್ತಾ ಹೋಗುವಾಗ ಇಂತಹ ಪರಿಸ್ಥಿತಿ ಉದ್ಭವಿಸುತ್ತದೆ. ಈ ಬರದ ಪರಿಸ್ಥಿತಿ ನಿಭಾಯಿಸಲು ಜಲತಜ್ಞರ ಜೊತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಹಿಂದೆ ನಗರದಲ್ಲಿ ಜನವಸತಿ ಪ್ರದೇಶಗಳು ಕಡಿಮೆ ಇತ್ತು. ಆದರೆ ಈಗ ಜಾಸ್ತಿಯಾಗಿದೆ. ಹಾಗಾಗಿ ನೀರಿನ ಬಳಕೆಯೂ ಜಾಸ್ತಿಯಾಗಿದೆ. ಸಮುದ್ರದ ನೀರು ಸಂಸ್ಕರಿಸಿ ದಿನಬಳಕೆಗೆ ಬಳಸಲಾಗುವುದು. ನಗರಗಳ ಕೆರೆಗಳ ಅಭಿವೃದ್ಧಿಯ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.