ಕುಂದಾಪುರ, ಆ 2(DaijiworldNews/ AK): ನಕ್ಸಲ್ ಪೀಡಿತ ಹೆಬ್ರಿ ವಲಯದ ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಂಜಾ-ಕಾರಿಮನೆ-ಎಡ್ಮಲೆ ರಸ್ತೆಯ ದುರಸ್ತಿಗೆ ಜಿಲ್ಲಾಡಳಿತ ಮುಂದಾಗಿದೆ. ಜುಲೈ 21 ರಂದು ದಾಯ್ಜಿವರ್ಲ್ಡ್ ಪ್ರಕಟಿಸಿದ ವಿವರವಾದ ವರದಿ ಮಾಡಿ ರಸ್ತೆಯ ಶೋಚನೀಯ ಸ್ಥಿತಿಯನ್ನ ಗಮನಕ್ಕೆ ತಂದಿತ್ತು.
ಕರ್ನಾಟಕದ ಚಿರಾಪುಂಜಿ ಎಂದು ಕರೆಯಲ್ಪಡುವ ಮಡಾಮಕ್ಕಿಯು ಆಗುಂಬೆ ಪ್ರಸ್ಥಭೂಮಿಯಲ್ಲಿ ನೆಲೆಗೊಂಡಿದೆ ಮತ್ತು ಕಾಡುಗಳಿಂದ ಆವೃತವಾಗಿದೆ. ಹಂಜ-ಕಾರಮನೆ-ಎಡ್ಮಲೆಗೆ ಸಂಪರ್ಕ ಕಲ್ಪಿಸುವ 2.5 ಕಿ.ಮೀ ಕೆಸರಿನ ರಸ್ತೆ ಹತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ಈ ಭಾಗದ 150 ಕುಟುಂಬಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳು ಹಾಗೂ ದಿನಗೂಲಿ ಕಾರ್ಮಿಕರು ಶಾಲೆಗೆ, ಕೆಲಸಕ್ಕೆ ತೆರಳಲು ಪರದಾಡುಕೊಂಡೆ ಓಡಾಡಬೇಕಿತ್ತು.
ದಾಯ್ಜಿವರ್ಲ್ಡ್ ನ ವರದಿಯು ಸ್ಥಳೀಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಮುಖಂಡರು ಎಂಎಲ್ಸಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರಿಗೆ ಮಾಹಿತಿ ನೀಡಿದ್ದು, ಅವರು ಸಮಸ್ಯೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ರಸ್ತೆ ಡಾಂಬರೀಕರಣ ಕಾಮಗಾರಿ ಗುರುವಾರ ಆರಂಭವಾಗಿದ್ದು, 150 ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಪರಿಹಾರ ದೊರಕಿದೆ.