ಬಂಟ್ವಾಳ, 01(DaijiworldNews/AK): ಪಲ್ಗುಣಿ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಅಮ್ಮುಂಜೆ ಸೋಮನಾಥೇಶ್ವರ ದೇವಸ್ಥಾನ ಸಹಿತ ಇಲ್ಲಿನ ಹೊಳೆಬದಿಯ ಕಡಪು ಕರಿಯ ಎಂಬಲ್ಲಿ ಸುಮಾರು 8 ಕುಟುಂಬಗಳಿಗೆ ನೀರು ನುಗ್ಗಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರ ನಿರ್ದೇಶನದಂತೆ ಎಲ್ಲಾ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ನದಿಯಲ್ಲಿ ಕಸದ ರಾಶಿಯಿಂದ ರಕ್ಷಣಾ ಕಾರ್ಯಕ್ಕೆ ಕೊಂಚ ಮಟ್ಟಿಗೆ ತೊಂದರೆಯಾಗಿತ್ತು.
ಕಳೆದ ಕೆಲವು ದಿನಗಳಿಂದ ಮೈದುಂಬಿ ಹರಿಯುತ್ತಿದ್ದ ಪಲ್ಗುಣಿ ನದಿಯಲ್ಲಿ ನಿನ್ನೆ ರಾತ್ರಿಯ ಬಳಿಕ ಸುರಿದ ಮಳೆಗೆ ನದಿಯ ನೀರ ಮಟ್ಟ ಏಕಾಏಕಿ ಏರಿಕೆಯಾಗಿ ಈ ಅವಾಂತರ ಸೃಷ್ಟಿಯಾಗಿದೆ. ಅಗ್ನಿಶಾಮಕ ದಳದ ಬೋಟ್ ಮೂಲಕ ಅವರನ್ನು ರಕ್ಷಣೆಯಲ್ಲಿ ತೊಡಗಿದ್ದಾರೆ.
ಮೆಸ್ಕಾಂ ವಿದ್ಯುತ್ ತಂತಿಗಳು ಕೂಡ ಇಲ್ಲಿ ಇದ್ದ ಕಾರಣಕ್ಕೆ ಕರೆಂಟ್ ಕಡಿತಗೊಳಿಸಿದ ಬಳಿಕ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಎಲ್ಲಾ ಕುಟುಂಬಕ್ಕೆ ಪೊಳಲಿ ಸರ್ವಮಂಗಲ ಸಭಾಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಶಿಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ. ಸ್ಥಳದಲ್ಲಿ ತಹಶಿಲ್ದಾರ್ ಅವರು ಮೊಕ್ಕಾಂ ಹೂಡಿದ್ದಾರೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಧಕೃಷ್ಣ ತಂತ್ರಿ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ರಾಧ, ಸದಸ್ಯರಾದ ಕಾರ್ತಿಕ್ ಬಲ್ಲಾಳ್, ಚಂದ್ರಹಾಸ ಪಲ್ಲಿಪಾಡಿ, ಭಾಗೀರಥಿ, ರವೀಂದ್ರ ಸುವರ್ಣ, ಲಕ್ಮೀಶ್ ಶೆಟ್ಟಿ, ಲೋಕೇಶ್ ಭರಣಿ, ಕಂದಾಯ ನಿರೀಕ್ಷಕ ವಿಜಯ್ ಪಿಡಿಒಗಳಾದ ಮಾಲಿನಿ,ನಯನ,ಪ್ರಮುಖರಾದ ವೆಂಕಟೇಶ ನಾವಡ, ಯಶವಂತ ಪೊಳಲಿ ಸಹಿತ ಅನೇಕರ ತಂಡ ರಕ್ಷಣಾ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.