ಕುಂದಾಪುರ,ಆ 01 : (DaijiworldNews/ AK):ಬುಧವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಗದ್ದೆಮನೆ ಉಪ ಗ್ರಾಮದ ಪ್ರದೀಪ್ ಶೆಟ್ಟಿ, ಗೀತಾ ಶೆಟ್ಟಿ ಹಾಗೂ ಪ್ರೇಮ ಶೆಟ್ಟಿ ಎಂಬುವರ ಮೂರು ಮನೆಗಳು ಧರೆಗುರುಳಿವೆ.
ನಿರಂತರ ಮಳೆಗೆ ಕಂಬಳಗದ್ದೆ ಸಮೀಪದ ನದಿಯ ನೀರು ಉಕ್ಕೇರಿದ್ದು, ಇಲ್ಲಿನ ಮನೆಗಳು ಜಲಾವೃತ್ತವಾಗಿವೆ. ಹೊಳೆಯ ಹೂಳೆತ್ತದೇ ಇರುವುದು ನೆರೆ ನೀರು ಮನೆಗಳಿಗೆ ನುಗ್ಗಲು ಮುಖ್ಯ ಕಾರಣ ಎನ್ನಲಾಗಿದೆ. ನೀರಿನ ಮಟ್ಟ ಮೇಲೇರುತ್ತಿದ್ದಂತೆ ಜಾಗೃತವಾದ ನಿವಾಸಿಗಳು ಜಾನುವಾರುಗಳನ್ನು ಬೇರೆಡೆಗೆ ಸಾಗಿಸಿದ್ದು, ಸಂಬಂಧಿಕರ ಮನೆಗೆ ವಲಸೆ ಹೋಗಿದ್ದರೆನ್ನಲಾಗಿದೆ. ಮನೆಗಳು ಕುಸಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಹಾನಿಗೀಡಾಗಿವೆ. ಪೀಠೋಪಕರಣಗಳು, ಟಿವಿ, ಫ್ರೀಜರ್ ಇನ್ನಿತರ ವಸ್ತುಗಳು ಕೂಡ ಹಾನಿಯಾಗಿದೆ.
ಗುರುವಾರ ಬೆಳಿಗ್ಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ತಹಶೀಲ್ದಾರ್ ಶೋಭಾಲಕ್ಷ್ಮೀ, ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಉದಯ ಕುಲಾಲ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ವರ್ಷವೂ ಭಾರಿ ಮಳೆಗೆ ನದಿಗಳಲ್ಲಿ ನೀರು ಮನೆ ಬಾಗಿಲಿಗೆ ಬಂದು ಸಮಸ್ಯೆ ಆಗುತ್ತಿದ್ದು ಇದರ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿಯನ್ನು ನೀಡಲಾಗಿದೆ.