ಬಂಟ್ವಾಳ , 31(DaijiworldNews/AK): ನೇತ್ರಾವತಿ ನದಿಯು ಪ್ರವಾಹವನ್ನು ತಗ್ಗಿಸಿ ಆತಂಕ ದೂರ ಮಾಡಿದ್ದರೂ ಮುಳುಗಡೆಯಾಗಿದ್ದ ಬಂಟ್ವಾಳ ಬಸ್ತಿಪಡ್ಪುನಿಂದ ಕಂಚಿಕಾರಪೇಟೆಯ ಮೂಲಕ ಗೂಡಿನಬಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನೇತ್ರಾವತಿ ಪಾಲಾಗಿದೆ.
ನೇತ್ರಾವತಿ ನದಿ ಕಿನಾರೆಯಲ್ಲಿ ಹಾದುಹೋಗುವ ಈ ರಸ್ತೆಯು ಪಾಣೆಮಂಗಳೂರು ಕಡೆಯಿಂದ ಬಂಟ್ವಾಳಕ್ಕೆ ಬರುವ ಹಳೆಯ ಒಳರಸ್ತೆಯಾಗಿದ್ದು, ಕಂಚಿಕಾರ ಪೇಟೆಯಲ್ಲಿ ಡಾಮರು ರಸ್ತೆಯ ಡಾಮಾರು ನೆರೆಯ ರಭಸಕ್ಕೆ ಸಿಕ್ಕಿ ನೇತ್ರಾವತಿ ನದಿಯ ಒಡಲನ್ನು ಸೇರಿದೆ.ಪಾಣೆಮಂಗಳೂರು ಹಳೆಯ ಬ್ರಿಟಿಷ್ ಕಾಲದ ಸೇತುವೆಯ ಮೂಲಕ ಬಂದವರು ಬಂಟ್ವಾಳಕ್ಕೆ ತೆರಳಲು ಬಲು ಹತ್ತಿರದ ರಸ್ತೆ ಇದಾಗಿತ್ತು. ನೆರೆ ಬಂದಾಗ ಜನರು ಈ ರಸ್ತೆ ಬದಿಯಲ್ಲಿ ನಿಂತು ನೆರೆ ವೀಕ್ಷಿಸುತ್ತಿದ್ದರು.
ಹಲವೆಡೆಗಳಲ್ಲಿ ಹಾನಿ:
ಹಲವು ಕಡೆಗಳಲ್ಲಿ ಗುಡ್ಡಕುಸಿತದ ಘಟನೆ ನಡೆಯುತ್ತಿದ್ದು, ಪುದು ಗ್ರಾಮದ ಹಲವು ಮನೆಗಳಿಗೆ ಹಾನಿಯಾಗಿದ್ದು, ಪುಣಚ ಹಾಗೂ ಮಾಣಿ ಸೂರಿಕುಮೇರು ವಿನಲ್ಲಿಯೂ ಹಾನಿ ಸಂಭವಿಸಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.