ಕುಂದಾಪುರ, 31(DaijiworldNews/AK):ನೆರೆ ಪರಿಹಾರ ಪೀಡಿತ ಪ್ರದೇಶಗಳಿಗೆ ತತ್ಕ್ಷಣದ ಪರಿಹಾರ ಒದಗಿಸುವುದಕ್ಕೆ ಸರ್ಕಾರ ಹಾಗೂ ಸ್ಥಳೀಯಾಡಳಿತ ಬದ್ಧವಾಗಿದೆ. ಕಡಲ್ಗೊರೆತದಂತಹ ಸಮಸ್ಯೆಗಳನ್ನು ಅಧ್ಯಯನ ಪೂರಕವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ಕುಂದಾಪುರದಲ್ಲಿ ಬುಧವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತ ನೆರೆ ಪೀಡಿತ ಪ್ರದೇಶಗಳಾಗಿ ಬದಲಾಗಿದೆ, ಪ್ರಕೃತಿ ವಿಕೋಪದಿಂದ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ಇದೇ ಸಂದರ್ಭದಲ್ಲಿ ಸಂತಾಪ ಸೂಚಿಸಿದರು.
ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು ನೂರು ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾನೂನಾತ್ಮಕ ಪರಿಹಾರಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳಿಯಾಡಳಿತ ಬದ್ಧವಾಗಿದೆ ಎಂದು ಹೇಳಿದರು. ಭತ್ತ ಬೆಳೆ ನಾಶ ಪರಿಶೀಲಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪರಿಸರ ಸೂಕ್ಷ್ಮ ವಲಯಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳುವ ದೃಷ್ಟಿಯಲ್ಲಿ ಗಾಡ್ಲಿಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಕ್ಕೆ ತರುವಂತೆಯೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.
ವಿಧಾನಸಭೆ ಹಾಗೂ ವಿಧಾನಪರಿಷತ್ ಗಳಲ್ಲಿ ವಿರೋಧ ಪಕ್ಷಗಳು ನಡೆದುಕೊಳ್ಳಬೇಕಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರಬೇಕೆ೦ದು ಹಗಲು ಕನಸು ಕಾಣುತ್ತಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸುದೀರ್ಘ ಕಾಲದವರೆಗೆ ಇರುವುದಿಲ್ಲ. ಈ ಮೈತ್ರಿಗೆ ಭವಿಷ್ಯವಿಲ್ಲ. ಕರಾವಳಿಯಲ್ಲಿ ಬಿಜೆಪಿ ಧರ್ಮಾಧರಿತ ಬೀಜವನ್ನು ಬಿತ್ತಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಾಂಗ್ರೆಸ್ ಹೋರಾಡಲಿದೆ ಎಂದು ಅವರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಅಯೋಧ್ಯೆಯ ಅಪೂರ್ಣ ಶ್ರೀರಾಮ ಮಂದಿರ ಹಿಂದೂ ಧರ್ಮಕ್ಕೆ ಬಿಜೆಪಿ ಮಾಡಿದ ಅಪಮಾನ. ರಾಮ ಮಂದಿರ ಇರುವ ಉತ್ತರ ಪ್ರದೇಶದಲ್ಲಿಯೇ ಬಿಜೆಪಿ ನೆಲಕಚ್ಚಿದೆ. ಬಜೆಟ್ ಮೈತ್ರಿ ಉಳಿಸಿಕೊಳ್ಳುವುದಕ್ಕೆ ಬೇಕಾಗಿ ಮಂಡಿಸಿದಂತಿದೆ. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದವರು ಈಗ ದೋಸ್ತಿ ಮಾಡಿಕೊಂಡಿದ್ದಾರೆ ಎಂದಿದ್ದಲ್ಲದೇ, ಲೋಕಸಭೆಯಲ್ಲಿ ರಾಗಾ (ರಾಹುಲ್ ಗಾಂಧಿ ಅವರನ್ನು ಅವರ ಆಪ್ತ ಬಳಗ ಕರೆಯುವ ಹೆಸರು) ಎದರು ಮೋದಿ ಧ್ವನಿ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಬಗ್ಗೆ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುತ್ತಲೇ ಇಲ್ಲ. ಧರ್ಮಾಧರಿತ ರಾಜಕಾರಣವೇ ಬಿಜೆಪಿಯ ಗುರಿ ಎಂದು ಅವರು ಟೀಕಿಸಿದ್ದಾರೆ.