ಬಂಟ್ವಾಳ, , 31(DaijiworldNews/AK): ರಾಜ್ಯದ ವಿವಿಧೆಡೆ ಪ್ರಾಕೃತಿಕ ವಿಕೋಪದಿಂದ ಭಾರೀ ಹಾನಿ ಸಂಭವಿಸಿದ್ದು, ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ವಿತರಿಸಬೇಕು ಎಂದು ರಾಜ್ಯ ವಿಪಕ್ಷ ನಾಯಕ ಆರ್,ಅಶೋಕ್ ಒತ್ತಾಯಿಸಿದ್ದಾರೆ.
ಬಂಟ್ವಾಳದ ಆಯ್ದ ನೆರೆಪೀಡಿತ ಪ್ರದೇಶಗಳಿಗೆ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಭೇಟಿ ನೀಡಿದ ಅವರು, ಬಳಿಕ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ರಾಜ್ಯದ ಕಾಂಗ್ರೇಸ್ ಸರ್ಕಾರದ ಅಕ್ರಮಗಳಿಗೆ ಸ್ಪಷ್ಟಣೆ ನೀಡಲು ಹೋಗಿರುವ ಮುಖ್ಯಮಂತ್ರಿಯವರು, ತಕ್ಷಣವೇ ದೆಹಲಿ ಪ್ರವಾಸವನ್ನು ಕೈ ಬಿಟ್ಟು ರಾಜ್ಯಕ್ಕೆ ಬರಬೇಕು, ಮೊದಲು ಜನರ ಸಮಸ್ಯೆ ಆಲಿಸುವಂತೆ ಅವರು ಕರೆ ನೀಡಿದರು.
ರಾಜ್ಯದಲ್ಲಿ ಆಗಿರೋ ಮಳೆಹಾನಿ ವೀಕ್ಷಣೆಗೆ ಬಂದಿದ್ದೇನೆ, ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ರೀತಿಯ ಹಾನಿ ಯಾಗಿದೆ ಸಾವಿನ ಜೊತೆಗೆ ಹಲವು ರೀತಿಯಲ್ಲಿ ರಾಜ್ಯದಲ್ಲಿ ಹಾನಿ ಆಗಿದೆ.ನಾನು ಕಂದಾಯ ಸಚಿವ ಆಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನ ಕೊಡ್ತಾ ಇದ್ದೆವು. ಹಿಂದೆ ನಮ್ಮ ಕಾಂಗ್ರೆಸ್ ಮಿತ್ರರು ತೆರೆಯುತ್ತಿದ್ದ ಗಂಜಿಕೇಂದ್ರವನ್ನು ತಾನು ಕಂದಾಯ ಸಚಿವನಾಗಿದ್ದ ಅವಧಿಯಲ್ಲಿ ಅದನ್ನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ಕೊಟ್ಟಿದ್ದೆ, ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸ್ತಾ ಇಲ್ಲ ಎಂದವರು ಆರೋಪಿಸಿದರು.
ದ.ಕ.ಉಸ್ತುವಾರಿ ಸಚಿವರು ಕಾಣ್ತಾ ಇಲ್ಲ:
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಮಂಗಳೂರಿಗೆ ಬರದೇ 15 ದಿನ ಮೇಲಾಗಿದೆ, ಅವರ ಹೈಕಮಾಂಡ್ ಜಿಲ್ಲಾ ಮಂತ್ರಿ ಸ್ಥಳದಲ್ಲಿರಲು ಹೇಳಿದರೂ, ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ ಎಂದು ಟೀಕಿಸಿದರು.
ರಮಾನಾಥ್ ರೈ ಅನ್ನೋ ಕಾಂಗ್ರೆಸ್ ಮುಖಂಡರು ಆವತ್ತು ಪರಿಹಾರದ ವಿಚಾರದಲ್ಲಿ ಜಗಳ ಮಾಡಿದ್ದರು, ಸರ್ಕಾರ ಐದು ಲಕ್ಷ ಕೊಡೋದು ಕಂಜೂಸ್ ತನ ಅಂದಿದ್ದರು. ಆದರೆ ಈಗ ಇವರ ಸರ್ಕಾರ ಮೋದಿಯವರ 1.25 ಲಕ್ಷ ಕೊಡ್ತಾ ಇದೆ, ಆದರೆ ರಾಜ್ಯ ಸರ್ಕಾರ ಏನ್ ಕೊಡ್ತಾ ಇದೆ, ನಿಮಗೆ ನಾಚಿಕೆ ಇಲ್ವಾ?
ಹಾಗಿದ್ರೆ ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು? ಈ ಸರ್ಕಾರ ಬದುಕಿದೆ ಅಂತ ಜನರಿಗೆ ಆಗ್ತಿಲ್ಲ, ಇದನ್ನು ಜನ ಗಮನಿಸ್ತಾ ಇದಾರೆ. ಸರ್ಕಾರ ತಕ್ಷಣ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿ. ಪ್ರತೀ ಸಮಿತಿಗೂ ಐದು ಕೋಟಿ ಅನುದಾನ ಕೊಡಿ ಎಂದವರು ಆಗ್ರಹಿಸಿದರು.
ಪಕ್ಷದ ವತಿಯಿಂದ ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡಿ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪದ ಅಧ್ಯಯನ ನಡೆಸಲಾಗುತ್ತಿದ್ದು, ಎಲ್ಲೆಲ್ಲಿ ತಪ್ಪಾಗಿದೆಯೋ ಅದನ್ನ ಸರ್ಕಾರದ ಗಮನಕ್ಕೆ ತರ್ತೇವೆ, ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವುದಾಗಿ ಆರ್,ಅಶೋಕ್ ತಿಳಿಸಿದರು. ತಾನು ಸಚಿವನಾಗಿದ್ದ ಅವಧಿಯಲ್ಲಿ ಆರು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಪ್ರವಾಹ ಪರಿಹಾರಕ್ಕೆ ನೀಡಲಾಗಿತ್ತು ಎಂದವರು ಈ ಸಂದರ್ಭ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.