ಕುಂದಾಪುರ, 31(DaijiworldNews/AK): ಕಳೆದ ಒಂದೂವರೆ ದಿನದಿಂದ ಆಕಸ್ಮಿಕವಾಗಿ ಬಾವಿಯೊಳಗೆ ಬಂಧಿಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಮೊಸಳೆಯೊಂದು ಅಧಿಕಾರಿಗಳು ಮತ್ತು ಗ್ರಾಮಸ್ಥರ ಸತತ ಕಾರ್ಯಾಚರಣೆ ಬಳಿಕ ಸೆರೆ ಹಿಡಿಯಲಾಗಿದೆ.
ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ವಡೇರಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ಮಂಗಳವಾರ ಮೊಸಳೆ ಪ್ರತ್ಯಕ್ಷವಾಗಿತ್ತು. ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ದಳ ಕಂದಾಯ ಇಲಾಖೆ ಅವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕಿ, ಬಾವಿಯ ಒಂದು ಬದಿಯ ಆವರಣ ತೆರವುಗೊಳಿಸಿ ಕೋಳಿಮಾಂಸ ಕಟ್ಟಿಡಲಾಗಿದ್ದ ಬೋನು ಇಟ್ಟು ಬಂಧಿಸುವ ಕಾರ್ಯಾಚರಣೆ ನಡೆಸಿದ್ದರು.
ನಾಗೂರು ನೆಟ್ವರ್ಕ್ ಅಂಡ್ ಸೆಕ್ಯೂರಿಟಿ ಸಲ್ಯೂಷನ್ ಇವರ ಸಹಕಾರದೊಂದಿಗೆ ಬಾವಿಯ ಸುತ್ತಲೂ ಸಿ ಸಿ ಕ್ಯಾಮೆರಾವನ್ನು ಅಳವಡಿಸಿ ದೂರದಿಂದ ಕಂಪ್ಯೂಟರ್ ಮೂಲಕ ಮೊಸಳೆಯ ಓಡಾಟವನ್ನು ಗಮನಿಸಲಾಗಿತ್ತು.
ಆದರೆ ಇದ್ಯಾವುದಕ್ಕೂ ಮೊಸಳೆ ಮಾತ್ರ ಜಪ್ಪೆನ್ನದೇ ಬಾವಿಯಾಳಕ್ಕೆ ಹೋಗಿತ್ತು. ಮಂಗಳವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸ್ಥಳೀಯ ಮೀನುಗಾರರ ಸಲಹೆಯಂತೆ ಬಾವಿಯ ನೀರಿಗೇ ಬೀಡಿನ ಬಲೆ ಹಾಕಿ ಮೊಸಳೆಯನ್ನು ಬಂಧಿಸಿ ಮೇಲಕ್ಕೆತ್ತಲಾಯಿತು. ಬಳಿಕ ಅರಣ್ಯಾಧಿಕಾರಿಗಳು ಕೊಂಡೊಯ್ದು ಬಿಟ್ಟಿದ್ದಾರೆ.