ಮಂಗಳೂರು, ಮೇ 18(Daijiworld News/MSP): ನಾಥೂರಾಂ ಗೋಡ್ಸೆ ಪರ ಟ್ವೀಟ್ ಮಾಡಿ ಕಾಂಗ್ರೆಸ್ ಹಾಗೂ ಸ್ವಪಕ್ಷೀಯರ ಆಕ್ರೋಶಕ್ಕೆ ಕಾರಣವಾದ ಸಂಸದ ನಳಿನ್ ಕುಮಾರ್ ಕಟೀಲ್ ,ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ವಿರುದ್ದ ದ.ಕ. ಜಿಲ್ಲಾ ಕಾಂಗ್ರೆಸ್ ಮೇ 18 ರ ಶನಿವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಪಕ್ಷದ ಕಚೇರಿ ಬಳಿ ಪ್ರತಿಭಟನೆ ನಡೆಸಿದೆ.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಗೋಡ್ಸೆ ಪರ ಟ್ವೀಟ್ ಮಾಡಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಅವಮಾನಿಸಿದ ನಳಿನ್ ಕುಮಾರ್ ಅವರು ಭಾರತದಲ್ಲಿ ಇರಲು ಯೋಗ್ಯರಲ್ಲ ಬಾಪು ಹಂತಕ ಗೋಡ್ಸೆಯ ಪರ ಕಾಳಜಿ ಉಳ್ಳ ನಳಿನ್ ರನ್ನು ಅವರನ್ನು ತಕ್ಷಣ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಒಬ್ಬ ಸಂಸದನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಳಿನ್ ಅವರು ನಾಥುರಾಂ ಗೋಡ್ಸೆ ಜತೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹೋಲಿಕೆ ಮಾಡಿದ್ದಾರೆ. ಮಾತ್ರವಲ್ಲದೆ ದೇಶಕ್ಕಾಗಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವಮಾನಿಸಿ ಮಾಡಿರುವ ಟ್ವೀಟ್ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ನಳಿನ್ ಕುಮಾರ್ ಅವರನ್ನು ನಮ್ಮ ಸಂಸದರೆನ್ನಲು ನಾಚಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪಿತರನ್ನು ಅವಮಾನಿಸಿದ ದೇಶದ್ರೋಹಿ ನಳಿನ್ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಎಂದು ಆಗ್ರಹಿಸಿದರು.
ಇದೇ ವೇಳೆ ನಳಿನ್ ಕುಮಾರ್ ಕಟೀಲ್ ವಿರುದ್ದ ದಿಕ್ಕಾರ ಕೂಗಲಾಯಿತು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್ಗಳಾದ ಶಶಿಧರ ಹೆಗ್ಡೆ, ಅಬ್ದುಲ್ ಅಝೀಝ್, ಮತ್ತಿತರರು ಉಪಸ್ಥಿತರಿದ್ದರು.