ಮಂಗಳೂರು,ಮೇ 18(Daijiworld News/MSP): ದಾಖಲೆ ಪತ್ರಗಳಿಲ್ಲದೆ ಬೆಂಗಳೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಒಂದು ಕೋಟಿ ನಗದು ಸಾಗಿಸುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಿದ ಬೆನ್ನಲ್ಲೇ ಮೇ 18 ರ ಶನಿವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಗರದ ರಥಬೀದಿಯಲ್ಲಿರುವ ಉದ್ಯಮಿ ರಾಜು ಪವರ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಶುಕ್ರವಾರ ತಾನೇ ಬೆಂಗಳೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಒಂದು ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಮಲ್ಲೇಶ್ವರಂ ನಿವಾಸಿ ಮಂಜುನಾಥ್ (56) ಅವರನ್ನು ನಗರದ ರಥಬೀದಿಯಲ್ಲಿ ಬಂಧಿಸಲಾಗಿತ್ತು. ಅನುಮಾನಸ್ಪದವಾಗಿ ಓಡಾಡುತ್ತಿದ್ದ ಮಂಜುನಾಥ್ ನನ್ನು ಕಂಡ ಪೊಲೀಸರು ವಿಚಾರಣೆ ನಡೆಸಿ ಆತನ ಬ್ಯಾಗ್ ಪರಿಶೀಲಿಸಿದಾಗ 2000 ಹಾಗೂ 500ಮುಖಬೆಲೆಯ ಒಂದು ಕೋಟಿ ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ವ್ಯಕ್ತಿಯೊಬ್ಬರು ನೀಡಿದ ಈ ಹಣವನ್ನು ಮಂಗಳೂರಿನ ವ್ಯಕ್ತಿಯೊಬ್ಬರಿಗೆ ನೀಡಲು ಬಂದಿದ್ದೇನೆ ಎಂದಷ್ಟೇ ಹೇಳಿದ ಕಾರಣ ಅತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನಗರದಲ್ಲಿ ಅಕ್ರಮವಾಗಿ ಹಣದ ರವಾನೆಯಾಗುತ್ತಿದೆ ಎಂಬ ಮಾಹಿತಿ ಬಂದಿರುವ ಹಿನ್ನಲೆಯಲ್ಲಿ ನಗರದಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಬಿಗು ತಪಾಸಣೆ ನಡೆಸುತ್ತಿದ್ದಾರೆ.
ಇದಲ್ಲದೆ ಶನಿವಾರ ಬೆಳಗ್ಗೆಯೂ ಇಂದು ಕೂಡಾ ಕಾರ್ಯಾಚರಣೆ ನಡೆಸಿದ ಸಂದರ್ಭ ದಾವಣಗೆರೆ ಮೂಲದ ಮಂಜುನಾಥ್ (40) ಎಂಬಾತನ ಬಳಿ ದಾಖಲೆ ಪತ್ರಗಳಿಲ್ಲದ 24 ಲಕ್ಷ ನಗದು ಪತ್ತೆಯಾಗಿತ್ತು. ಇತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.