ಮಂಗಳೂರು, ಜು.30(DaijiworldNews/AA): ವಾಹನಗಳ ವೇಗ ಪತ್ತೆ ಮಾಡುವುದಕ್ಕಾಗಿ ಪೊಲೀಸರು 'ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್'ಗಳ ಬಳಕೆ ಆರಂಭಿಸಿದ್ದು, ಸೋಮವಾರ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಅಪಘಾತ ಗಳನ್ನು ತಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ವಾಹನಗಳ ವೇಗಮಿತಿ ಅಧಿಸೂಚನೆಯಂತೆ ದ.ಕ. ಜಿಲ್ಲಾ ಪೊಲೀಸರು 5 "ಮೊಬೈಲ್ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್'ಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ವಾಹನಗಳ ವೇಗ ಪತ್ತೆ ಮಾಡಲು ಪೊಲೀಸರಿಗೆ ಒದಗಿಸಲಾಗಿರುವ ರಾಡಾರ್ ಗನ್ ಕನಿಷ್ಠ 100 ಮೀಟರ್ ಅಂತರದಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುತ್ತದೆ.
ಮಂಗಳೂರು ನಗರ ಭಾಗ ಸೇರಿ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿಯೂ ರಾಡಾರ್ ಗನ್ ಬಳಸಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈಗಾಗಲೇ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಕಮಿಷನರೆಟ್ ವ್ಯಾಪ್ತಿಗೆ ಇಂತಹ 3 ಗನ್ಗಳನ್ನು ಒದಗಿಸಲಾಗಿದೆ.
ಸೋಮವಾರ ಬಂಟ್ವಾಳ ಸಂಚಾರ ಪೊಲೀಸರು ರಾ.ಹೆ.75ರ ತುಂಬೆ ರಾಮಲ್ಕಟ್ಟೆ ಭಾಗದಲ್ಲಿ ಸ್ಪೀಡ್ ಡಿಟೆಕ್ಷನ್ ರಾಡಾರ್ ಗನ್ ಕೆಮರಾ ಬಳಸುವ ಮೂಲಕ ವಾಹನಗಳ ವೇಗವನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದರು. ಬಂಟ್ವಾಳ ಸಂಚಾರ ಠಾಣೆ ಪಿಎಸ್ಐ ಸುತೇಶ್ ಕೆ.ಪಿ. ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮೊದಲ ದಿನ 62 ಪ್ರಕರಣಗಳು ದಾಖಲಾಗಿದ್ದು, 65 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ.
ಬಂಟ್ವಾಳ ಪೊಲೀಸರು ದಂಡ ವಿಧಿಸಿದ ಹೆದ್ದಾರಿ ಪ್ರದೇಶದಲ್ಲಿ ವೇಗದ ಮಿತಿ ೫೦ ಕಿ.ಮೀ. ಆಗಿದೆ. ಆದರೆ ಈ ಭಾಗದ ಬಹುತೇಕ ಫಲಕಗಳು ಕಿತ್ತು ಹೋಗಿವೆ. ಇರುವ ಕೆಲ ಫಲಕಗಳಲ್ಲಿ ಕೊಳೆ ತುಂಬಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಹೀಗಾಗಿ ಫಲಕಗಳನ್ನು ಸರಿಯಾಗಿ ಪ್ರದರ್ಶಿಸದೆ ದಂಡ ವಸೂಲಿ ಮಾಡಿರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.