ಉಳ್ಳಾಲ, ಜು.30(DaijiworldNews/AK): ಅರ್ಧದಷ್ಟು ದ್ವೀಪವನ್ನೇ ನುಂಗಿರುವ ಪಾವೂರು- ಉಳಿಯ ಅಕ್ರಮ ಮರಳುಗಾರಿಕೆ ಕುರಿತು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಜಿಲ್ಲಾಡಳಿತ ಮಂಗಳೂರು ಉಪ ವಿಭಾಗ ದಂಡಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಏಳು ಸದಸ್ಯರನ್ನು ಒಳಗೊಂಡ ಸಮಿತಿಗೆ ವಾರದೊಳಗೆ ಸರಕಾರಕ್ಕೆ ವರದಿ ಸಲ್ಲಿಸಲು ಆದೇಶ ನೀಡಿದ್ದರೂ, ವಾರ ಕಳೆದು ತಿಂಗಳಾದರೂ ಸಮಿತಿಯ ವರದಿ ಮಾತ್ರ ಜಿಲ್ಲಾಡಳಿತ ಕೈಸೇರಿಲ್ಲ.
ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಜನಗಾಗೃತಿ ಹಿನ್ನೆಲೆಯಲ್ಲಿ ನಿರಂತರವಾಗಿ ವರದಿ ಪ್ರಕಟಿಸಿದ ಪರಿಣಾಮವಾಗಿ ತನಿಖೆಗೆ ಒತ್ತಾಯಿಸಿದ್ದ ಜಿಲ್ಲಾಧಿಕಾರಿ ಅದಕ್ಕಾಗಿ ಸಮಿತಿಯನ್ನು ರಚಿಸದ್ದರು. ಆದರೆ ಈವರೆಗೂ ವರದಿ ಜಿಲ್ಲಾಡಳಿತ ಹಾಗೂ ಸರಕಾರದ ಕೈಸೇರದ ಹಿನ್ನೆಲೆಯಲ್ಲಿ ಮರಳು ಮಾಫಿಯಾ ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೈವಾಡ ಇದೆಯೇ ಅನ್ನುವ ಸಂಶಯವನ್ನು ಕುದ್ರು ನಿವಾಸಿಗಳು ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ : ಅಡ್ಯಾರ್ ಬಳಿಯ ಪಾವೂರು ಉಳಿಯದ ದ್ವೀಪ ಪ್ರದೇಶದ ಸುತ್ತಲೂ ನೇತ್ರಾವತಿ ನದಿ ಆವರಿಸಿದೆ. ಪಾವೂರು ಉಳಿಯ ಪ್ರದೇಶದ ಜನರು ನಗರದ ಸಂಪರ್ಕ ಬೆಳೆಸಬೇಕಾಗಿದರೆ ಮಳೆಗಾಲದಲ್ಲಿ ನೇತ್ರಾವತಿ ನದಿಯಲ್ಲಿ ದೋಣಿ ಮೂಲಕವೇ ಸಾಗಬೇಕು. ಇಂತಹ ದ್ವೀಪ ಪ್ರದೇಶದ ಒಂದು ಭಾಗದಲ್ಲಿ ಸಾಕಷ್ಟು ಭೂಭಾಗ ಅಕ್ರಮ ಮರಳು ಮಾಫಿಯಾದವರ ಮರಳುಗಾರಿಕೆಯಿಂದ ನಾಶವಾಗಿದೆ. ಹಾರೆಯ ಇನ್ನಿತರ ಉಪಕರಣಗಳ ಮೂಲಕ ದ್ವೀಪದ ಭಾಗವನ್ನು ಕೊರೆದು ಮರಳು ತೆಗೆಯಲಾಗಿದೆ. 80 ಎಕರೆಯಷ್ಟಿದ್ದ ದ್ವೀಪವೀಗ 40 ಎಕರೆಯಷ್ಟು ಮರಳುಗಾರಿಕೆಗೆ ಬಲಿಯಾಗಿದ್ದು, ಸ್ಥಳೀಯರು ಭಾರೀ ಹೋರಾಟಕ್ಕೆ ಮುಂದಾಗಿದ್ದರು. ಬಳಿಕ ಎಚ್ಚೆತ್ತುಕೊಂಡ ದ.ಕ. ಜಿಲ್ಲಾಡಳಿತ ತನಿಖೆಗೆ ಆದೇಶ ನೀಡಿತ್ತು.
ತಿಂಗಳಾದರು ಸಲ್ಲಿಕೆಯಾಗದ ವರದಿ : ಪಾವೂರು- ಉಳಿಯದಲ್ಲಿ ಅಕ್ರಮ ಮರಳುಗಾರಿಕೆ ನಡೆಯುವುದ್ದರಿಂದ ಮಳೆಗಾಲದ ಸಂಭಾವ್ಯ ವಿಪತ್ತುಗಳು ಉಂಟಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳೂರು ಉಪವಿಭಾಗದ ಉಪವಿಭಾಗಧಿಕಾರಿ ಹರ್ಷವರ್ಧನ್ ಎಸ್.ಜೆ. ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಕೆ ಮಾಡುವಂತೆ ಜೂನ್ 28 ರಂದು ಸೂಚಿಸಿದ್ದರು. ಆದರೆ ತಿಂಗಳು ಕಳೆದರೂ ವರದಿ ಮಾತ್ರ ಇನ್ನೂ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ.
ಈಗಲೂ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ : ಹೋರಾಟ ಕಾವು ಪಡೆದ ಬಳಿಕ ದ್ವೀಪವನ್ನೇ ಕೊರೆದು ಮರಳುಗಾರಿಕೆ ನಡೆಸುವುದು ನಿಂತಿಲ್ಲ. ಆದರೆ ಪ್ರತಿದಿನ ರಾತ್ರಿ ಸಮಯದಲ್ಲಿ ನದಿಯಲ್ಲಿ ಡ್ರೆಜ್ಜಿಂಗ್ ಮೂಲಕ ಮರಳುಗಾರಿಕೆ ನಡೆಯುತ್ತಿದೆ. ಸಮಿತಿ ವರದಿ ಕೊಡಲು ತಡ ಮಾಡುತ್ತಿದ್ದರೆ ಇತ್ತ ಮರಳುಗಾರಿಕೆ ಮಾತ್ರ ನಿಂತಿಲ್ಲ ಎನ್ನುತ್ತಾರೆ ಸ್ಥಳೀಯರು. ಅಕ್ರಮ ಮರಳುಗಾರಿಕೆಯ ಬಗ್ಗೆ ಸರಿಯಾದ ಮಾಹಿತಿ ನೀಡಿದರೂ ಇನ್ನು ಯಾವುದೇ ಸರಿಯಾದ ಕ್ರಮವಾಗಿಲ್ಲ. ಸಮಿತಿ ರಚಿಸಿ ತಿಂಗಳು ಆಗುತ್ತಾ ಬಂದರೂ ಯಾವುದೇ ರೀತಿಯ ವರದಿ ಬಗ್ಗೆ ಮಾಹಿತಿಯಿಲ್ಲ. ಜಿಲ್ಲಾಧಿಕಾರಿಗಳು ವರದಿ ಪಡೆಯಲು ತಡ ಮಾಡುತ್ತಿರುವಾಗ ಹಲವು ಅನುಮಾನಗಳು ಮೂಡುತ್ತಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.