ಕಡಬ, ಜು.29(DaijiworldNews/AA): ನಿಫಾ ವೈರಸ್ ಬಾಧಿಸಿದ್ದ ಕೇರಳದ ರೋಗಿಗೆ ಚಿಕಿತ್ಸೆ ನೀಡಿ ತಾನೆ ನಿಫಾ ಸೋಂಕಿಗೆ ತುತ್ತಾಗಿ ಕಳೆದ 8 ತಿಂಗಳಿನಿಂದ ಕಡಬದ ನರ್ಸ್ ಓರ್ವರು ಕೋಮಾದಲ್ಲಿದ್ದಾರೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಅವರು 8 ತಿಂಗಳ ಹಿಂದೆ ಕೋಮಾಕ್ಕೆ ಜಾರಿದ್ದಾರೆ.
ಟಿಟ್ಟೋ ತೋಮಸ್ ಅವರು ಬಿಎಸ್ಸಿ ನರ್ಸಿಂಗ್ ಪದವೀಧರರಾಗಿದ್ದು, ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
2023ರ ಸೆಪ್ಟೆಂಬರ್ ನಲ್ಲಿ ಟಿಟ್ಟೋ ತೋಮಸ್ ನಿಫಾ ವೈರಸ್ ಬಾಧಿತ ರೋಗಿಗಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಕ್ವಾರಂಟೈನ್ನಲ್ಲಿದ್ದ ತೋಮಸ್ ಗೆ 2 ತಿಂಗಳ ಬಳಿಕ ವಿಪರೀತ ತಲೆನೋವು ಕಾಣಿಸಿಕೊಂಡಿದ್ದು, ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ ಸ್ಟ್ರೋಕ್ಗೆ ತುತ್ತಾಗಿರುವುದು ತಿಳಿದುಬಂದಿದೆ. ಮರುದಿನವೇ ಅವರು ಕೋಮಾಕ್ಕೆ ಜಾರಿದ್ದಾರೆ ಎನ್ನಲಾಗಿದೆ.
ಕಳೆದ 8 ತಿಂಗಳಿನಿಂದ ಆಸ್ಪತ್ರೆಯ ಆಡಳಿತ ಮಂಡಳಿಯ ವತಿಯಿಂದಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ 40 ಲಕ್ಷ ರೂ. ಖರ್ಚನ್ನು ಭರಿಸಿದೆ. ಇನ್ನು ಕುಟುಂಬಸ್ಥರು ವಿಚಾರಿಸಿದಾಗ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಇನ್ಮುಂದೆ ನಿಭಾಯಿಸುವುದು ಕಷ್ಟ ಎಂದು ಆಡಳಿತ ಮಂಡಳಿಯು ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಅತ್ಯುನ್ನತ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಕೇರಳ ಸರ್ಕಾರದ ಮೊರೆ ಹೋಗಿದ್ದಾರೆ.
ನಿಫಾ ಸೋಂಕಿಗೆ ತುತ್ತಾಗಿರುವ ಟಿಟ್ಟೋ ಥಾಮಸ್ ನ ಪ್ರಾಣ ಉಳಿಸಲು ತಂದೆ, ತಾಯಿ ಹಾಗೂ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಹೋದರ ಕಳೆದ ಎಂಟು ತಿಂಗಳಿನಿಂದ ನಿತ್ಯವೂ ಹೋರಾಡುತ್ತಿದ್ದಾರೆ.