ಕುಂದಾಪುರ , ಜು.28(DaijiworldNews/AK):ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಲಗೋರಿ ಕುಂದಾಪ್ರದ ಭಾಷೆಯ ಹೆಸರಿನಲ್ಲಿ ಕ್ರೀಡಾಕೂಟ ಜು.28ರ ಬೆಳಿಗ್ಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಆರಂಭಗೊಂಡಿತು.
ಕ್ರೀಡಾಕೂಟವನ್ನು ಹಿಂಗಾರ ಅರಳಿಸುವ ಮೂಲಕ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ, ಕಲಾಕ್ಷೇತ್ರ ಕುಂದಾಪುರ ಇನಿದನಿ ಕಾರ್ಯಕ್ರಮದ ಮೂಲಕ ಹೆಚ್ಚು ಪರಿಚಿತಗೊಂಡ ಸಂಸ್ಥೆ. ಕಲೆ, ಸಂಸ್ಕೃತಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆಯನ್ನು ಈ ಸಂಸ್ಥೆ ನೀಡುತ್ತಿದೆ. ಇದೀಗ ಕುಂದಾಪ್ರ ಭಾಷೆಯ ಹೆಸರಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಗೋಲಿ ಆಡುವ ಮೂಲಕ ಚಾಲನೆ ನೀಡಿದರು. ಕ್ರೀಡಾಪಟು ರಾಜೀವ ಕೋಟ್ಯಾನ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕಿರಣ್ ಕೊಡ್ಗಿ ಸೈಕಲ್ ಟಯರ್ ಆಡುವ ಮೂಲಕ ಗಮನ ಸಳೆದರು. ಕಾರ್ಯಕ್ರಮಕ್ಕೆ ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಆಗಮಿಸಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಇತ್ತೀಚೆಗಿನ ದಿನಗಳಲ್ಲಿ ಜಾತಿ ಮತ್ತು ಧರ್ಮದ ಹೆಸರಲ್ಲಿ ಕ್ರೀಡೆಗಳ ಆಯೋಜನೆ ಆಗುತ್ತಿದೆ. ಆದರೆ ಭಾಷೆಯ ಹೆಸರಿನಲ್ಲಿ ಒಂದು ಕ್ರೀಡಾ ಕೂಟ ಆಗುವುದು ಕುಂದಾಪುರದಲ್ಲಿ ಪ್ರಥಮ ಎಂದು ಭಾವಿಸಲಾಗಿದೆ. ಆಧುನಿಕತೆಯ ಹೆಸರಲ್ಲಿ ನಮ್ಮ ಕ್ರೀಡೆಗಳು ನೇಪಥ್ಯಕ್ಕೆ ಸರಿದು ಹೋಗುತ್ತಾ ಇವೆ. ಮುಂದಿನ ಜನಾಂಗ ನಮ್ಮ ಭಾಷೆ ಸಂಸ್ಕೃತಿಯನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವಂತಹ ಸದುದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮೀ, ಯುವಜನ ಮತ್ತು ಕ್ರೀಡಾ ಇಲಾಖೆಯ ಕುಸುಮಕರ ಶೆಟ್ಟಿ, ಸ್ಥಳೀಯ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲರಾದ ಕಿರಣ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಗೀತಗಾಯನ ಸಂಸ್ಥೆಯ ಸನತ್ ಕುಮಾರ್ ರೈ, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರದೀಪ ಕುಮಾರ್ ಶೆಟ್ಟಿ, ರಾಘವೇಂದ್ರ ಕುಂದರ್ ಬ್ರಹ್ಮಾವರ, ರಮೇಶ್ ಕುಂದರ್, ಕಲಾಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ ಕಾವೇರಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.