ಮಂಗಳೂರು, ಜು.28(DaijiworldNews/AA): ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಬಂದ್ ಆಗುತ್ತಿವೆ. ಇದೀಗ ಎಡಕುಮೇರಿ ಕಡಗರಳ್ಳಿ ಮಧ್ಯೆ ಭಾರೀ ಭೂಕುಸಿತ ಉಂಟಾಗಿದ್ದು, ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ರದ್ದಾಗಿದೆ.
ಶುಕ್ರವಾರ ಸಂಜೆ ಭಾರೀ ಭೂಕುಸಿತದಿಂದ ಹಳಿಯ ಮೇಲೆ ಮಣ್ಣು ಬಿದ್ದಿದೆ. ಹಳಿ ದುರಸ್ತಿಪಡಿಸುವ ಕಾರ್ಯ ಮುಂದುವರಿದಿದ್ದು, ಇದರಿಂದ ಕೆಲ ರೈಲುಗಳ ಸಂಚಾರ ಜುಲೈ ೨೯ರವರೆಗೆ ರದ್ದುಗೊಳಿಸಲಾಗಿದೆ. ಜೊತೆಗೆ ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲು ಹಳಿಯ ಕೆಳಭಾಗದಲ್ಲಿ ಭಾರೀ ಆಳಕ್ಕೆ ಮಣ್ಣು ಜರಿದಿದೆ. ಇದರಿಂದ ಹಳಿಗೆ ಅಪಾಯ ಎದುರಾಗಿದೆ. ರೈಲು ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸುತ್ತಿದ್ದು, ಸುರಿಯುತ್ತಿರುವ ಮಳೆಯು ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡಿದೆ.
ಕೆಎಸ್ಆರ್ ಬೆಂಗಳೂರು-ಕಣ್ಣೂರು ರೈಲು, ಬೆಂಗಳೂರು-ಕಾರವಾರ ಕೆಎಸ್ಆರ್ ಎಕ್ಸ್ಪ್ರೆಸ್ ರೈಲು, ಕಣ್ಣೂರು-ಬೆಂಗಳೂರು ರೈಲು, ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು, ಬೆಂಗಳೂರು-ಮುರುಡೇಶ್ವರ ರೈಲು, ಮುರ್ಡೇಶ್ವರ- ಬೆಂಗಳೂರು ರೈಲು, ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್ಪ್ರೆಸ್ ರೈಲು, ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು, ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದಾಗಿರುತ್ತದೆ.