ಕಾರ್ಕಳ, ಜು.28(DaijiworldNews/AA): ನಗರದ ಪುಲ್ಕೇರಿ ವಸತಿ ಸಮುಚ್ಚಯ ಹೊರಾಂಗಣದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದ ಪರಿಣಾಮವಾಗಿ ಮಹಿಳೆಯೊಬ್ಬರು ಗಾಯಗೊಂಡಿದ್ದು, ಸಮುಚ್ಚಯದ ಇತರ ವಸತಿ ಗೃಹಗಳಿಗೂ ಬೆಂಕಿಯ ಜ್ವಾಲೆ ತಗುಲಿದ್ದು ಅಪಾರ ಹಾನಿ ಉಂಟಾಗಿದೆ.
ಉಡುಪಿ ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಇರ್ವತ್ತೂರು ಉದಯ ಎಸ್ ಕೋಟ್ಯಾನ್ ಎಂಬವರ ವಸತಿಗೃಹದ ಹೊರಾಂಗಣದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಶನಿವಾರ ತಡರಾತ್ರಿ 10:30ರ ವೇಳೆಗೆ ಹೊತ್ತಿ ಉರಿಯಲು ಶುರುವಾಗಿತ್ತು.
ಕ್ಷಣ ಮಾತ್ರದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವುದರಿಂದ 4ನೇ ಮಹಡಿಯ ವಸತಿಗೃಹದಲ್ಲಿದ್ದ ನಿವಾಸಿಗಳಿಗೆ ಸಮುಚ್ಚಯದಿಂದ ಹೊರ ಬರಲು ತ್ರಾಸದಾಯಕವಾಗಿತ್ತು. 4ನೇ ಮಹಡಿಯ ವಸತಿಗೃಹಗಳಿಗೂ ಬೆಂಕಿಯ ಜ್ವಾಲೆ ಪಸರಿಕೊಂಡು ಗೃಹಪಯೋಗಿ ಪರಿಕರಗಳಿಗೂ ಬೆಂಕಿ ತಗುಲಿದೆ. ಇಡೀ ಸಮುಚ್ಚಯ ಹೊಗೆಯಿಂದ ಆವರಿಸಿಕೊಂಡಿತ್ತು.
ಘಟನೆಯಿಂದ ಸಮುಚ್ಚಯದ ವಸತಿಗೃಹಗಳ ಕಿಟಕಿಗಳ ಗಾಜುಗಳು ಪುಡಿ ಪುಡಿಯಾದರೆ, ಬಾಗಿಲುಗಳು ಮುರಿದುಕೊಂಡಿದೆ. ಕಟ್ಟಡ ಅಂಶಿಕ ಹಾನಿಗೊಳಗಾಗಿದೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್ ನೇತೃತ್ವದಲ್ಲಿ ಸಿಬ್ಬಂದಿಯವರಾದ ಅಚ್ಯುತ್ ಕರ್ಕೇರಾ, ಸುರೇಶ್ ಕುಮಾರ್, ಜಯಮೂಲ್ಯ, ನಿತ್ಯಾನಂದ, ರವಿಚಂದ್ರ ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.